ಅರಸೀಕೆರೆ: ರಾಜ್ಯದಲ್ಲಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ಆಪರೇಷನ್ ಕಮಲ ನಡೆಸಿ ಅಸ್ಥಿರಗೊಳಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಆಪರೇಷನ್ ಕಮಲ ಅದೆಲ್ಲಾ ಊಹಾಪೋಹ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಶನಿವಾರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಎಂಬುದು ಸೋತಿರುವವರು, ಕೆಲಸ ಇಲ್ಲದವರು ಆಡುವ ಮಾತು. ಆಪರೇಷನ್ ಕಮಲದ ಬಗ್ಗೆ ಮಾತನಾಡುವವರು ಅಕ್ಷರಶಃ ಹುಚ್ಚರು. ಹಾಗೇನಾದರು 50 ಶಾಸಕರನ್ನು ಆಪರೇಷನ್ ಮಾಡಿದರೆ, ಪ್ರಜಾಪ್ರಭುತ್ವಕ್ಕೆ ಅರ್ಥ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಮಿಷಕ್ಕೆ ಬಲಿಯಾಗುವವರಿಗೆ ಜನರು ಯಾವುದರಲ್ಲಿ ಹೊಡೀತಾರೋ ಗೊತ್ತಿಲ್ಲ. ಆತ್ಮಸಾಕ್ಷಿ ಇದ್ದವರು ಯಾವುದೇ ಆಮಿಷಕ್ಕೆ ಬಲಿಯಾಗಲ್ಲ. 50 ಜನ ಪಕ್ಷಾಂತರ ಮಾಡಿದರೆ ಪ್ರಜಾಪ್ರಭುತ್ವ ಏತಕ್ಕೆ, ಚುನಾವಣೆ ಏಕೆ ನಡೆಯಬೇಕು ಎಂದು ಪ್ರಶ್ನಿಸಿದರು.
ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವಾಗ, ನಮ್ಮ ಸರ್ಕಾರ ಬಂದರೆ ನಿನ್ನನ್ನು ಮಂತ್ರಿ ಮಾಡುವುದಾಗಿ ಸಿದ್ರಾಮಣ್ಣ, ಡಿ.ಕೆ.ಶಿವಕುಮಾರ್, ಸುರ್ಜೇವಾಲಾ ಮೂವರೂ ಭರವಸೆ ನೀಡಿದ್ದರು. ಇಂದಲ್ಲ ನಾಳೆ ಅವರು ನೀಡಿದ ಭರವಸೆ ಈಡೇರಬಹುದು ಎಂಬ ನಿರೀಕ್ಷೆ ಹೊಂದಿದ್ದೇನೆ. ಸರ್ಕಾರ ರಚನೆ ನಂತರ ಮೊದಲ ಪಟ್ಟಿಯಲ್ಲೇ ನನ್ನ ಹೆಸರು ಇರಲಿದೆ ಎಂದು ಹೇಳಲಾಗಿತ್ತು. ಅದು ಆಗಲಿಲ್ಲ. ಹಾಸನದಲ್ಲಿ ನಡೆದ ಕೆಂಪೇಗೌಡ ಜಯಂತಿ ಬಹಿರಂಗ ಕಾರ್ಯಕ್ರಮದಲ್ಲೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ನನಗೆ ಹೈಕಮಾಂಡ್ ನೀಡಿದ ಜವಾಬ್ದಾರಿ ನಿಭಾಯಿಸುವೆ. ರಾಜ್ಯಾದ್ಯಂತ ಸಂಘಟನೆ ಮಾಡಿ ಕೆಲಸ ಮಾಡುವೆ. ನಮ್ಮ ನಾಯಕರು ಏನೇ ತೀರ್ಮಾನ ಮಾಡಿದರೂ ನಾನು ಅದಕ್ಕೆ ಬದ್ಧ. ಯಾವುದೇ ಕಾರಣಕ್ಕೂ ಅಪಸ್ವರ ಎತ್ತುವುದಿಲ್ಲ. ಸಚಿವ ಸ್ಥಾನ ಸಿಗದ 25 ಮಂದಿ ಹಿರಿಯ ಶಾಸಕರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ತೀರ್ಮಾನ ಸಹ ಆಗಿದೆ. ಮುಂದಿನ 1 ವಾರದೊಳಗೆ ಈ ಬಗ್ಗೆ ತೀರ್ಮಾನ ಆಗಲಿದೆ ಎಂದು ಹೇಳಿದರು.
ನಾನು ದೇವೇಗೌಡರಿಗೆ ಋಣಿ, ಮೊಮ್ಮಕ್ಕಳಿಗಲ್ಲ
ನಾನು ದೇವೇಗೌಡರ ಋಣದಲ್ಲಿ ಇದ್ದೀನಿ, ಹಾಗಂದ ಮಾತ್ರಕ್ಕೆ ಅವರ ಮನೆ ಮಕ್ಕಳಿಗೆಲ್ಲ ಋಣಿಯಾಗಿರಬೇಕೆಂದೇನಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿರುಗೇಟು ನೀಡಿದರು.
ದೇವೇಗೌಡರಿಗೆ ನಾನು ಯಾವತ್ತು ಋಣಿ. ಆದರೆ ಮೊಮ್ಮಕ್ಕಳಿಗೆ, ಮರಿಮಕ್ಕಳಿಗೆಲ್ಲ ರಾಜಕಾರಣದಲ್ಲಿ ಋಣಿಯಾಗರಬೇಕು ಎಂದು ಇಲ್ಲ. ಐದು ವರ್ಷ ಸಂಸದರಾಗಿ ನನಗೆ ಒಂದೇ ಒಂದು ರೂಪಾಯಿ ಅನುದಾನ ನೀಡಿಲ್ಲ. ನನ್ನ ಒಂದು ಕೆಲಸ ಮಾಡಿಕೊಟ್ಟಿಲ್ಲ. ತಾಲೂಕಿನಲ್ಲಿರುವ 36 ಗ್ರಾಮ ಪಂಚಾಯಿತಿಗಳಲ್ಲಿ, 36 ಪಂಚಾಯಿತಿ ನನ್ನ ಹಿಡಿತದಲ್ಲಿ ಇವೆ. ನನ್ನ ಕ್ಷೇತ್ರ ಏನು ಎಂದು ನನಗೆ ಗೊತ್ತು ಎಂದು ಹೇಳಿದರು.
ನಾನು ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. 1991 ರಲ್ಲಿ ದೇವೇಗೌಡರಿಗೆ ಅರಸೀಕೆರೆಯಲ್ಲಿ ಕೇವಲ 13 ಸಾವಿರ ವೋಟು ಬಂದಿದ್ದವು. ಅದಾದ ನಂತರ ನಡೆದ ಮೂರು ಲೋಕಸಭೆ ಚುನಾವಣೆಗಳಲ್ಲಿ 70, 80, 90 ಸಾವಿರ ವೋಟು ಕೊಡಿಸಿದ್ದೇನೆ. ಆ ವೋಟುಗಳಿ ಇವರದ್ದಾ? ಪ್ರಜ್ವಲ್ ರೇವಣ್ಣ ಬಂದಿದ್ರಾ ವೋಟು ಕೊಡಿಸಲು ಎಂದು ಹೇಳಿದರು.
ಸಿಎಂ ಬದಲಾವಣೆ ಗೊತ್ತಿಲ್ಲ:
ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎರಡೂವರೆ ವರ್ಷ ಮಾಡಿದ್ದಾರೋ, ಐದು ವರ್ಷ ಮಾಡಿದ್ದರೋ ಅವರವರ ಒಪ್ಪಂದ ನಮಗ್ಯಾರಿಗೂ ಗೊತ್ತಿಲ್ಲ. ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಎರಡೂವರೆ ವರ್ಷ ಬರುವವರೆಗೂ ಕಾಯಬೇಕು. ಅಲ್ಲಿಯವರೆಗೆ ಮೌನವಾಗಿ ಕಾಯಿರಿ. ಮಾತುಕತೆ ನಡೆದಿದ್ದರೆ ಹೈಕಮಾಂಡ್ ಭಾಗಿಯಾಗುತ್ತದೆ. ಹೈಕಮಾಂಡ್‌ಗಿಂತ ಯಾರು ದೊಡ್ಡವರಿದ್ದಾರೆ, ಈಗಲೇ ಯಾಕೆ ಇದೆಲ್ಲ ಪ್ರಸ್ತಾಪ? ಎಂದು ಪ್ರಶ್ನೆ ಮಾಡಿದರು.