ಬಾಗಲಕೋಟೆ:ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಕುರಿತು ಮತಗಟ್ಟೆ ಮಟ್ಟದ ಅಧಿಕಾರಿಗಳು ಮತ್ತು ಮೇಲ್ವಿಚಾರಕರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮನೆ ಮನೆಗೆ ತೆರಳಿ ಆಪ್‍ಲೈನ್ ಮೂಲಕ ಸಮೀಕ್ಷೆ ಮಾಡಲಿದ್ದಾರೆಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಮುಖ್ಯ ಚುನಾವಣಾಧಿಕಾರಿಗಳ ಅದ್ಯಕ್ಷತೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ನಡೆದ ವಿಡಿಯೋ ಸಂವಾದದ ಬಳಿಕ ಮಾತನಾಡಿದ ಅವರು ಈ ಮೊದಲು ಆ್ಯಪ್ ಮೂಲಕ ಸಮೀಕ್ಷೆ ಕೈಗೊಳ್ಳಲಾಗುತ್ತು. ಆದರೆ ಈಗ ಆಪ್‍ಲೈನ್ ಮೂಲಕ ಮಾಡಲಾಗುತ್ತಿದ್ದು, ಮತಗಟ್ಟೆ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಮನೆಗಳಿಗೆ ತೆರಳಿದಾಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕಾರ್ಯವನ್ನು ಮಾಡಲಿದ್ದಾರೆ.
ಅಕ್ಟೋಬರ 1, 2023, ಜನವರಿ 1, 2024, ಎಪ್ರೀಲ್ 4, 2024 ಹಾಗೂ ಅಕ್ಟೋಬರ 1, 2024ರ ಅರ್ಹತಾ ದಿನಾಂಕಕ್ಕೆ 18 ವರ್ಷ ಪೂರ್ಣಗೊಳ್ಳುವವರು ನಮೂನೆ 6, ತಿದ್ದುಪಡಿಗಾಗಿ ನಮೂನೆ 8, ಮತದಾರರ ಪಟ್ಟಿಯಿಂದ ತೆಗೆದು ಹಾಕಲು ನಮೂನೆ 7ನ್ನು ಸ್ವತ ಮತಗಟ್ಟೆ ಅಧಿಕಾರಿಗಳು ಭರ್ತಿಮಾಡಿಕೊಳ್ಳಲಿದ್ದಾರೆ. ಕುಟುಂಬದ ಸದಸ್ಯರಲ್ಲಿ ಮೃತಪಟ್ಟವರಿದ್ದರೆ ಸರ್ವೆ ಕಾರ್ಯದಲ್ಲಿ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದರು. ಸಮೀಕ್ಷೆಯ ಪ್ರತಿದಿನದ ವರದಿಯನ್ನು ತಾಲೂಕಾ ಕಚೇರಿಗೆ ವರದಿ ಸಲ್ಲಿಸುವಂತೆ ಸರ್ವೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕುಟುಂಬದ ಸದಸ್ಯರೆಲ್ಲರ ಹೆಸರು ಒಂದೇ ಮತಗಟ್ಟೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಜೊತೆಗೆ ಮಾಹಿತಿ ತಪ್ಪಿದ್ದಲ್ಲಿ ಸರಿಪಡಿಸಲು ಕ್ರಮವಹಿಸುವಂತೆ ತಿಳಿಸಿದರು. ಯುವ ಮತದಾರರು ನೋಂದಣಿ ಮಾಡುವ ಕುರಿತು ಜಾಗೃತಿ ಮೂಡಿಸುವಂತೆ ಸ್ವೀಪ್ ಚಟುವಟಿಕೆಗಳನ್ನು ನಡೆಸಲು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಚುನಾವಣಾ ಶಿರಸ್ತೇದಾರ ರಜಪೂತ ಸೇರಿದಂತೆ ಆಯಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.