ಶಾಸಕ ಎ.ಅರ್.ಕೃಷ್ಣಮೂರ್ತಿ 
ಜಿಲ್ಲೆ

ಆಪ್ತ ಸಹಾಯಕನನ್ನು ನೇಮಕ ಮಾಡಿಕೊಂಡಿಲ್ಲ

ಕೊಳ್ಳೇಗಾಲ: ನಾನು ಶಾಸಕರ ಆಪ್ತ ಸಹಾಯಕ, ಕೌನ್ಸಿಲರ್ ಎಂದು ಹೇಳಿಕೊಂಡು ಲೈನ್‌ಮನ್‌ನನ್ನು ನಿಂದಿಸಿರುವ ಆಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಸಂಬಂಧ ತನಿಖೆ ಆಗಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೋನ್‌ಕಾಲ್ ರೆಕಾರ್ಡ್ ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ತಾನು ಶಾಸಕನ ಆಪ್ತ ಸಹಾಯಕ, ಕೌನ್ಸಿಲರ್ ಎಂದು ಹೇಳಿಕೊಂಡು ಲೈನ್‌ಮನ್‌ನನ್ನು ಅವಾಚ್ಯ ಪದಗಳಿಂದ ನಿಂದಿಸಿರುವುದು ತಿಳಿದು ಬಂದಿದೆ. ಇದು ಖಂಡನೀಯ. ನಾನು ಆಪ್ತ ಸಹಾಯಕನನ್ನು ನೇಮಕ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಅಧಿಕಾರ ದೊಡ್ಡದಿರಲಿ, ಚಿಕ್ಕದಿರಲಿ ಸರ್ಕಾರಿ ಅಧಿಕಾರಿಗಳಿಗೆ ಗೌರವ ನೀಡಬೇಕು. ಲೈನ್‌ಮನ್ ಗೌರವಯುತವಾಗಿ ಮಾತನಾಡುತ್ತಿದ್ದರೂ ಮತ್ತೊಬ್ಬ ವ್ಯಕ್ತಿ ಕೆಟ್ಟ ಪದಗಳಿಂದ ನಿಂದಿಸುವುದು ಸರಿಯಲ್ಲ. ಮುಂದೆ ಯಾರೂ ಈ ರೀತಿ ನಡೆದುಕೊಳ್ಳಬಾರದು ಎಂದು ಹೆಸರು ಹೇಳದೆ ಮಾಜಿ ನಗರಸಭಾ ಸದಸ್ಯ ಶಾಂತರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.