ಹಾಸನ: ಆಪರೇಷನ್ ಸಿಂಧೂರ ಏರ್‌ಸ್ಟ್ರೈಕ್ ಮೂಲಕ ಪಾಕ್ ಉಗ್ರರ ನೆಲೆಗಳನ್ನು ಭಾರತೀಯ ವಾಯುಪಡೆ ನಾಶಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಶಂಕರಮಠ ರಸ್ತೆಯಲ್ಲಿ ಪಟಾಕಿ ಸಿಡಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪರವಾಗಿ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಶಾಸಕ ಹುಲ್ಲಹಳ್ಳಿ ಸುರೇಶ್ ನೇತೃತ್ವದಲ್ಲಿ ವಿಜಯೋತ್ಸವವನ್ನು ಆಯೋಜಿಸಿದರು.
ನಂತರ ಮಾತನಾಡಿದ ಶಾಸಕ ಹುಲ್ಲಹಳ್ಳಿ ಸುರೇಶ್, ಈ ಏರ್‌ಸ್ಟ್ರೈಕ್ ಪಾಕಿಸ್ತಾನಕ್ಕೆ ಭಾರತ ನೀಡಿದ ಗಂಭೀರ ಎಚ್ಚರಿಕೆಯಾಗಿದ್ದು, ದೇಶದ ಬಲ ಶಕ್ತಿಯ ಸ್ಪಷ್ಟ ಸಂಕೇತವಾಗಿದೆ. ಪಾಕಿಸ್ತಾನ ಪದೇಪದೆ ನಮ್ಮನ್ನು ಕೆಣಕುತ್ತಿರುವುದರಿಂದ ಭಾರತ ಸ್ಪಷ್ಟ ಉತ್ತರ ನೀಡಿದೆ ಎಂದು ಶ್ಲಾಘಿಸಿದರು.
ಈ ಕಾರ್ಯಾಚರಣೆ ಉಗ್ರರಿಗೆ ತೀಕ್ಷ್ಣ ಸಂದೇಶ ನೀಡಿದ್ದು, ಅವರು ಇನ್ನು ಮುಂದೆ ಶರಣಾಗುವುದು ಉತ್ತಮ. ಇಲ್ಲದಿದ್ದರೆ ಪಾಕಿಸ್ತಾನವೂ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ. ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದವರ ಕುಟುಂಬಗಳು ಮತ್ತು ದೇಶದ ಜನತೆಗೆ ಈ ಕಾರ್ಯಾಚರಣೆ ಆತ್ಮಸ್ಥೈರ್ಯ ನೀಡಿದೆ. ಯಾರು ಯುದ್ಧಕ್ಕೆ ಬಂದರೂ ಭಾರತ ಹಿಂದೆ ಸರಿಯದು. ಈ ಕಾರ್ಯಾಚರಣೆಯ ಮೂಲಕ ದೇಶವು ತನ್ನ ಶಕ್ತಿಯನ್ನು ವಿಶ್ವದ ಮುಂದೆ ತೋರಿಸಿದೆ ಎಂದರು.
ಬಿಜೆಪಿ ಮುಖಂಡರಾದ ಐನೆಟ್ ವಿಜಯ್ ಕುಮಾರ್, ಲೋಹಿತ್ ಕೌಡಳ್ಳಿ, ಮನೋಹರ್ ಮುಂತಾದವರಿದ್ದರು.