ಜಿಲ್ಲೆ

ಆಪತ್ತಿನಲ್ಲಿರುವ ಜೀವಕ್ಕೆ ರಕ್ತ ಅಮೂಲ್ಯ

ಚಿಕ್ಕಬಳ್ಳಾಪುರ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪೊಲೀಸರು, ವಕೀಲರು, ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಸೇರಿ ಅನೇಕರು ರಕ್ತದಾನ ಮಾಡಿದರು.

ಬೆಳಗ್ಗೆಯಿಂದಲೇ ಹಲವರು ರಕ್ತದಾನ ಮಾಡುವ ಮೂಲಕ ಮಹಾತ್ಕಾರ್ಯಕ್ಕೆ ಕೈ ಜೋಡಿಸಿದರು. ಇದೇ ವೇಳೆ ಕರೊನಾ ಸೋಂಕು ನಿಯಂತ್ರಣದ ಮುಂಜಾಗ್ರತಾ ಕ್ರಮವಾಗಿ ಪರಸ್ಪರ ಅಂತರ ಕಾಪಾಡಿಕೊಳ್ಳುವಿಕೆಯ ಜತೆಗೆ ಪ್ರತಿಯೊಬ್ಬರು ಮಾಸ್ಕ್ ಧರಿಸಿದ್ದರು.

ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಆಪತ್ತಿನಲ್ಲಿರುವ ಜೀವ ಉಳಿಸುವ ಮಹತ್ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ರೆಡ್‌ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಪ್ರೊ ಕೋಡಿರಂಗಪ್ಪ ಮನವಿ ಮಾಡಿದರು.

ಸರಿಯಾದ ಸಮಯಕ್ಕೆ ರಕ್ತ ಸಿಗದೇ ಪ್ರಾಣಬಿಟ್ಟ ಮತ್ತು ನೋವು ಅನುಭವಿಸಿದ ಪ್ರಕರಣಗಳು ಸಾಕಷ್ಟಿವೆ, ಅನೇಕ ಬಾರಿ ವೈದ್ಯರು ತುರ್ತು ಚಿಕಿತ್ಸೆ ನೀಡಲು ಸಿದ್ಧರಾಗಿದ್ದರೂ ರೋಗಿಗೆ ಅಗತ್ಯವಿರುವ ರಕ್ತಕ್ಕಾಗಿ ಗಂಟೆಗಟ್ಟಲೇ ಪರಿತಪಿಸಿದ ನಿದರ್ಶನಗಳು ಇವೆ. ಈ ಘಟನೆಗಳು ಭವಿಷ್ಯದಲ್ಲಿ ಸಂಭವಿಸುವುದನ್ನು ತಪ್ಪಿಸಲು ಪ್ರತಿಯೊಬ್ಬರು ದಾನಿಗಳಾಗಬೇಕು ಎಂದು ಜಿಲ್ಲಾ ಖಜಾಂಚಿ ಎಂ.ಜಯರಾಮ್ ಸಲಹೆ ನೀಡಿದರು.

ಇಲ್ಲಿಯವರೆಗೂ ರೆಡ್‌ಕ್ರಾಸ್ ಸಂಸ್ಥೆ ವಿವಿಧ ಸಂಘಟನೆಗಳು ಕೈಗೊಳ್ಳುವ ರಕ್ತದಾನ ಶಿಬಿರಗಳಿಗೆ ಅಗತ್ಯ ಸಹಕಾರ ನೀಡುತ್ತಿತ್ತು. ಆದರೆ, ಇದೀಗ ಸಂಸ್ಥೆಯೇ ಅನೇಕರ ಬೆಂಬಲದೊಂದಿಗೆ ಶಿಬಿರ ನಡೆಸುತ್ತಿದೆ ಎಂದು ತಿಳಿಸಿದರು.

ವೈದ್ಯಾಧಿಕಾರಿ ಡಾ ಬಾಬುರೆಡ್ಡಿ, ಡಾ.ಕೆ.ಪಿ.ಶ್ರೀನಿವಾಸಮೂರ್ತಿ, ಮುಖಂಡರಾದ ಭದ್ರಾಚಲಂ, ರಘುರಾಂ, ಉನ್ನತಿ ವಿಶ್ವನಾಥ್, ಎನ್.ಬ್ರಹ್ಮಚಾರಿ ಇತರರಿದ್ದರು.