ಸಂತೋಷ ವೈದ್ಯ ಹುಬ್ಬಳ್ಳಿ
ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ಇಂಜಿನಿಯರಿಂಗ್ ಪದವಿ(ಬಿಇ)ಯ ಅಂತಿಮ ವರ್ಷ(8ನೇ ಸೆಮಿಸ್ಟರ್)ದ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಪರೀಕ್ಷೆ ತೆಗೆದುಕೊಂಡಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಪರೀಕ್ಷೆ ಬರೆಯುತ್ತಿದ್ದಾರೆ.
ಜೂ. 27 ಹಾಗೂ 29ರಂದು ಆನ್ಲೈನ್ನಲ್ಲಿ ಪರೀಕ್ಷೆ ನಡೆಸಲಾಗಿದ್ದು, ಎಲ್ಲ 1185 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 805 ಪುರುಷ ವಿದ್ಯಾರ್ಥಿಗಳು ಇದ್ದಾರೆ. ಮೆಕ್ಯಾನಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಸೇರಿ 7 ಕೋರ್ಸ್ಗಳಲ್ಲಿ ಇಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಥಿಯರಿ ಪರೀಕ್ಷೆಗಳು ಜುಲೈ 1ರವರೆಗೆ ನಡೆಯಲಿವೆ. ಜುಲೈ 2ರಿಂದ 5ರವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಿಗದಿಯಾಗಿವೆ.
ಆನ್ಲೈನ್ ಪರೀಕ್ಷೆ ನಡೆಸಲು ಮೈಕ್ರೋಸಾಫ್ಟ್ ಟೀಮ್್ಸ ತಂತ್ರಾಂಶದ ನೆರವು ಪಡೆಯಲಾಗಿದೆ. ಕೆಎಲ್ಇ ತಾಂತ್ರಿಕ ವಿವಿ ಕ್ಯಾಂಪಸ್ನಲ್ಲಿರುವ ಸಿ-ಲೈಟ್ ಕಟ್ಟಡದಲ್ಲಿ ಪರೀಕ್ಷಾ ಮೇಲ್ವಿಚಾರಣೆ ಕೊಠಡಿ ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿಯೊಬ್ಬ ಪರೀಕ್ಷಾ ಮೇಲ್ವಿಚಾರಕರು ಆನ್ಲೈನ್ನಲ್ಲಿ ಪರೀಕ್ಷೆ ಬರೆಯುವ ತಲಾ 9 ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲಿದ್ದಾರೆ. ಪರೀಕ್ಷೆ ಬರೆಯುವ ಮುನ್ನ ವಿದ್ಯಾರ್ಥಿಯ ಹಾಲ್ ಟಿಕೆಟ್ ಹಾಗೂ ಕಾಲೇಜಿನ ಗುರುತಿನ ಚೀಟಿಯನ್ನು ಪರಿಶೀಲಿಸಲಾಗುತ್ತದೆ. ವಿದ್ಯಾರ್ಥಿಯು ಏಕಾಂತ, ಅನುಕೂಲಕರ ಸ್ಥಳದಲ್ಲಿ ಕುಳಿತಿರುವುದನ್ನು ಖಾತರಿ ಪಡಿಸಿಕೊಳ್ಳಲಾಗುತ್ತದೆ. ವಿದ್ಯಾರ್ಥಿಯ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಕ್ಯಾಮರಾವು ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಯ ಮುಖ ಹಾಗೂ ಬರೆಯುವ ಉತ್ತರ ಪತ್ರಿಕೆ ಮೇಲೆ ಸದಾ ಫೋಕಸ್ ಆಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಪರೀಕ್ಷಾ ಅವಧಿ ಮುಗಿದ ಕೂಡಲೆ ತಕ್ಷಣ ಉತ್ತರ ಪತ್ರಿಕೆಯನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಎಕ್ಸಾಮ್ನೆಟ್ಗೆ ಅಪ್ಲೋಡ್ ಮಾಡಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
ಕೆಎಲ್ಇ ತಾಂತ್ರಿಕ ವಿವಿಯು ಸ್ವಾಯತ್ತ ವಿವಿಯಾಗಿದ್ದು, ದೇಶದ ವಿವಿಧೆಡೆಯಿಂದ ಇಂಜಿನಿಯರಿಂಗ್ ವ್ಯಾಸಂಗಕ್ಕೆ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆ ಸೇರಿಕೊಂಡ ಎಲ್ಲ ಸೆಮಿಸ್ಟರ್ಗಳ ವಿದ್ಯಾರ್ಥಿಗಳಿಗೆ ಕಳೆದ ಎರಡೂವರೆ ತಿಂಗಳು ಆನ್ಲೈನ್ನಲ್ಲಿ ಪಾಠ ಮಾಡಿ ಪಠ್ಯಕ್ರಮವನ್ನು ಪೂರ್ಣಗೊಳಿಸಲಾಗಿದೆ. ಬಿಇ 8ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಅಂತಿಮ ಪರೀಕ್ಷೆ ನಡೆಸುವ ಪೂರ್ವ ಜೂ. 22ರಂದು ಅಣಕು ಆನ್ಲೈನ್ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ಮೇಲ್ವಿಚಾರಕರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಜುಲೈ 9ರಿಂದ 31ರ ವರೆಗೆ 2, 4 ಹಾಗೂ 6 ನೇ ಸೆಮಿಸ್ಟರ್ ಆನ್ಲೈನ್ ಪರೀಕ್ಷೆಗಳು ನಿಗದಿಯಾಗಿವೆ. ಇವರಿಗೂ ಅಣಕು ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಹುತೇಕ ವಿದ್ಯಾರ್ಥಿಗಳು ಅನ್ಲೈನ್ನಲ್ಲಿ ಕೈ ಬರಹದಲ್ಲಿಯೇ ಉತ್ತರ ಬರೆಯುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರೇಖಾ ಚಿತ್ರ, ಚಿತ್ರ ಬಿಡಿಸುವುದು ಇತ್ಯಾದಿ ಕಂಪ್ಯೂಟರ್ ಬರವಣಿಗೆಯಲ್ಲಿ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಗಲಿಬಿಲಿಗೆ ಒಳಗಾಗದೇ ಸಮಚಿತ್ತದಿಂದ ಪರೀಕ್ಷೆ ಬರೆಯುವಂಥ ವಾತಾವರಣ ನಿರ್ವಿುಸಿದ್ದೇವೆ. ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಉತ್ತರ ಪತ್ರಿಕೆಯನ್ನು ಅಪ್ಲೋಡ್ ಮಾಡಲು ಹೆಚ್ಚುವರಿ ಸಮಯ ನೀಡಲಾಗಿದೆ. | ಡಾ. ಅನಿಲಕುಮಾರ ನಂದಿ, ಪರೀಕ್ಷಾ ನಿಯಂತ್ರಕರು, ಕೆಎಲ್ಇ ತಾಂತ್ರಿಕ ವಿವಿ, ಹುಬ್ಬಳ್ಳಿ