ಹುಲಸೂರು: ಆನ್‌ಲೈನ್ ಗೇಮ್‌ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡಿದ್ದರಿಂದ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದ ಬೇಲೂರ ಗ್ರಾಮದ ಯುವಕ ವಿಜಯಕುಮಾರ ಜಗನ್ನಾಥ ಹೊಳ್ಳೆ (೨೫) ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ. ಡಿ ಫಾರ್ಮಸಿ ಪದವೀಧರನಾಗಿದ್ದ ಈತ ಕೆಲ ತಿಂಗಳಿಂದ ಸಾಲ ಮಾಡಿ ಆನ್‌ಲೈನ್ ಗೇಮ್‌ನಲ್ಲಿ ತಲ್ಲೀನನಾಗಿ ೧೫ ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದ. ಇದರಿಂದ ಬೇಸತ್ತು ಜ್ಯೋತಿ ತಾಂಡಾ ಬಳಿ ಬೆಂಕಿ ಹಚ್ಚಿಕೊಂಡಿದ್ದ. ಗಂಭೀರ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಉಮರ್ಗಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೋಸ ಹೋಗಬೇಡಿ: ಆನ್‌ಲೈನ್ ಗೇಮ್, ಕ್ರಿಕೆಟ್ ಬೆಟ್ಟಿಂಗ್‌ನಿAದ ಲಕ್ಷಾಂತರ ಯುವಕರು ದಾರಿ ತಪ್ಪುತ್ತಿದ್ದಾರೆ. ಇದರಿಂದ ಯಾರೂ ಹಣ ಗೆದ್ದಿಲ್ಲ. ಹೀಗಾಗಿ ಯಾರೂ ಆನ್‌ಲೈನ್ ಗೇಮ್ ಆಡಬಾರದು ಎಂದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ವಿಜಯಕುಮಾರ ಆರೋಗ್ಯ ವಿಚಾರಿಸಲು ಬಂದಿದ್ದ ಶಾಸಕ ಶರಣು ಸಲಗರ ಜತೆ ಮಾತನಾಡುವಾಗ ಮಾಡಿದ ಮನವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲï ಆಗಿದೆ.