ಜಿಲ್ಲೆ

ಆನ್‌ಲೈನ್ ಗೇಮ್ ವಹಿವಾಟು ತನಿಖೆಗೆ ಆಗ್ರಹ

ಚಾಮರಾಜನಗರ: ರಾಜ್ಯ ಕಬ್ಬುಬೆಳೆಗಾರರ ಸಂಘದ ನಿರಂತರ ಹೋರಾಟದ ಲವಾಗಿ ಕೇಂದ್ರ ಸರ್ಕಾರ ಆನ್‌ಲೈನ್ ಗೇಮ್ ನಿಷೇಧಕ್ಕೆ ಮುಂದಾಗಿದ್ದು, ಆನ್‌ಲೈನ್ ಗೇಮ್‌ಗಳಲ್ಲಿ ಈ ವರೆಗೂ ನಡೆದಿರುವ ಹಣವಹಿವಾಟಿನ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದರು.

ದೇಶದಲ್ಲಿ ಆನ್‌ಲೈನ್ ಗೇಮ್‌ಗಳಿಂದ ಸುಮಾರು 20 ಸಾವಿರ ಕೋಟಿ ವ್ಯವಹಾರ ನಡೆಸಲಾಗುತ್ತಿದ್ದು, 50 ಕೋಟಿಗೂ ಹೆಚ್ಚು ಜನ ಇಂತಹ ಆನ್‌ಲೈನ್ ಗೇಮ್ನಲ್ಲಿ ಹಣ ಹೂಡಿಕೆ ಮಾಡಿ ಬಲಿಯಾಗಿದ್ದಾರೆ. ಇದರಿಂದ ಸಾವಿರಾರು ಕುಟುಂಬಗಳು ಬೀದಿಪಾಲಾಗಿದ್ದು, ಆಸ್ತಿಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆನ್‌ನೈನ್ ಗೇಮ್ ನಿಷೇಧ ಕಾಯ್ದೆ- 2025ರ ಜಾರಿಗೆ ತಂದಿರುವುದು ಸ್ವಾಗತಾರ್ಹ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದಲ್ಲಿ ಆನ್‌ಲೈನ್ ಗೇಮ್‌ಗಳಿಂದ ಈವರೆಗೆ ಆಗಿರುವ ಹಣಕಾಸಿನ ವ್ಯವಹಾರದ ಬಗ್ಗೆ ಸೂಕ್ತ ತನಿಖೆಯನ್ನು ಇಡಿ ನಡೆಸಿ, ಹಣ ಕಳೆದುಕೊಂಡಿರುವಂತಹ ಕುಟುಂಬಗಳಿಗೆ ನ್ಯಾಯ ಕೊಡಿಸುವಂತಹ ಕೆಲಸ ಮಾಡಬೇಕು. ಗ್ರಾಮೀಣ ಭಾಗದಲ್ಲಿ ನೊಂದವರು ತಮ್ಮ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಲು ಸಹಾಯವಾಣಿಯನ್ನು ತೆರೆಯಬೇಕು. ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖೆ ನಡೆಸಿದರೆ ಕೋಟ್ಯಾಂತರ ಪ್ರಕರಣಗಳು ಹೊರಕ್ಕೆ ಬರುತ್ತದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಕಾರ್ಯದರ್ಶಿ ಮಲೆಯೂರು ಮಹೇಂದ್ರ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಗಾಂಧಿ, ತಾಲೂಕು ಅಧ್ಯಕ್ಷ ಸತೀಶ್, ಬಸವರಾಜಪ್ಪ, ಗುರುವಿನಪುರ ಮೋಹನ್ ಹಾಜರಿದ್ದರು.