ಸಾಗರ: ಆನ್‌ಲೈನ್ ಗೇಮ್‌ಗಳಲ್ಲಿ ಹಣ ಕಳೆದುಕೊಂಡು ಯುವಜನರು ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ಆತಂಕಕಾರಿ ಎಂದು ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ಕಡೆಗಳಲ್ಲಿ ಆನ್‌ಲೈನ್ ಸೇರಿದಂತೆ ದುಶ್ಚಟಗಳಲ್ಲಿ ಯುವಜನರು ತೊಡಗಿಸಿಕೊಂಡು ಕೆಟ್ಟ ನಿರ್ಧಾರಕ್ಕೆ ಬರುತ್ತಿದ್ದಾರೆ. ಇಂತಹ ಘಟನೆಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು. ತಾಲೂಕಿನಲ್ಲಿಯೂ ಆತ್ಮಹತ್ಯೆ ಪ್ರಕರಣ ನಡೆಯುತ್ತಿದ್ದು, ಬೇರೆ ಕಾರಣವಿದ್ದರೂ ಆನ್‌ಲೈನ್ ಗೇಮ್‌ಗಳಲ್ಲಿ ಹಣ ನಷ್ಟ ಕೂಡ ಕಾರಣ ಇರಬಹುದು ಎಂದು ತಿಳಿಸಿದರು.
ಕುಡಿದು ವಾಹನ ಚಲಾಯಿಸುವ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಪ್ರವಾಸಿ ತಾಣಗಳಲ್ಲಿ ಕುಡಿದು ಬಾಟಲಿಗಳನ್ನು ಒಡೆಯುವುದು, ಅನೈತಿಕ ಚಟುವಟಿಕೆ ನಡೆಸುವುದು ಕಂಡು ಬಂದರೆ ಕ್ರಮ ಜರುಗಿಸಲಾಗುವುದು. ರಾಜ್ಯ ಸರ್ಕಾರ ನಶೆಮುಕ್ತ ಕರ್ನಾಟಕ ಯೋಜನೆ ಜಾರಿಗೆ ತಂದಿದೆ. ಮಾದಕ ವಸ್ತು ಸರಬರಾಜು, ಮಾರಾಟ ಮಾಡುವುದನ್ನು ಕಂಡು ಬಂದರೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದರು.
ನಗರವ್ಯಾಪ್ತಿಯಲ್ಲಿ ಸಂಚಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಶಾಸಕರ ಮಾರ್ಗದರ್ಶನದಲ್ಲಿ 56 ಸಿಸಿ ಕ್ಯಾಮರಾವನ್ನು ನಗರಸಭೆ ಮೂಲಕ ಅಳವಡಿಸಲಾಗಿದೆ. ಸಂಚಾರಿ ನಿಯಮ ಮೀರಿದವರ ವಿರುದ್ಧ ಕ್ರಮ ಖಚಿತ ಎಂದು ತಿಳಿಸಿದರು.