ಆನೇಕಲ್: ತಾಲೂಕಿಗೆ ಶಿಂಷಾ ನದಿ ನೀರು ತರುವುದೇ ನನ್ನ ಮೊದಲ ಗುರಿ ಎಂದು ಕೇಂದ್ರ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ಶಪಥ ಮಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಭವ್ಯ ಮೆರವಣಿಗೆಯಲ್ಲಿ ಮಾತನಾಡಿ, ಶಾಸಕನಾಗಿದ್ದಾಗ ನದಿ ನೀರು ತರಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ, ತದನಂತರ ಬಂದಂತಹ ಶಾಸಕರು ಅದನ್ನು ಬದಿಗೊತ್ತಿ ಬೆಂಗಳೂರಿನಿಂದ ನೀರು ತರುವ ಯೋಜನೆ ರೂಪಿಸಿದ್ದಾರೆ. ಈಗಾಗಲೇ ಇದರ ಬಗ್ಗೆಯೂ ಸರ್ಕಾರದ ಗಮನಕ್ಕೆ ತಂದಿದ್ದೇನೆ. ತಾಲೂಕಿಗೆ ಶುದ್ಧ ನೀರು ಹರಿಸಿಯೇ ತೀರುತ್ತೇನೆ ಎಂದರು.
ಗ್ರಾಪಂ ಸದಸ್ಯರಾದ ಕೂಡಲೇ ಕಿರೀಟ ಬರುವುದಿಲ್ಲ, ಸರಳ ಸಜ್ಜನಿಕೆಯಿಂದ ಮತದಾರರ ಕಷ್ಟ ಆಲಿಸಿ, ಅಧಿಕಾರ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತದೆ, ಜನರ ಸೇವೆ ಮಾಡಲು ರಾಜಕಾರಣಕ್ಕೆ ಬನ್ನಿ ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಆನೇಕಲ್‌ನಲ್ಲಿ ನಾನು ಏಕೆ ಸೋತೆ ಎಂಬ ನೋವು ಈಗಲೂ ಇದೆ. ಕಾರ್ಯಕರ್ತರು ಪಕ್ಷ ನಿಷ್ಠೆ ಮರೆಯಬಾರದು, ನಾನು ಎಂದು ಯಾರಿಗೂ ಬಿ ಫಾರಂ ಕೊಡಬೇಡಿ, ಅಧಿಕಾರ ಕೊಡಬೇಡಿ ಎಂದು ಹೇಳಿಲ್ಲ, ಒಬ್ಬ ವ್ಯಕ್ತಿಗಾಗಿ ದುಡಿಯುವ ಬದಲು ಪಕ್ಷಕ್ಕಾಗಿ ದುಡಿಯಿರಿ, ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಡಿ ಎಂದು ಮಾರ್ಮಿಕವಾಗಿ ನುಡಿದರು.
ಹಿಂದುಳಿದ ಮತ್ತು ಶೋಷಣೆಗೆ ಒಳಗಾದ ಸಮಾಜದವರಿಗೆ ಶೇ.1 ರಿಂದ 2 ಬಡ್ಡಿ ದರದಲ್ಲಿ ಸಾಲ ನೀಡಬೇಕೆಂದು ವಿತ್ತ ಸಚಿವರ ಬಳಿ ಮನವಿ ಸಲ್ಲಿಸಿದ್ದೇನೆ ಎಂದರು.
ಚಿತ್ರದುರ್ಗ ವ್ಯಾಪ್ತಿಯಲ್ಲಿ 18 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಿ ನೀರು ಹರಿಯುವಂತೆ ಮಾಡಿದ್ದೇನೆ, 15 ವರ್ಷಗಳಿಂದ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆಗಬೇಕೆಂಬ ಆಸೆ ಇತ್ತು, ಅದನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಮಾಡಿಸಿದ್ದೇನೆ ಎಂದು ಹೇಳಿದರು.
ಹಿಂದುಳಿದ ವರ್ಗ ಮತ್ತು ದಲಿತರು ಹೆಚ್ಚು ಐಎಎಸ್ ಐಪಿಎಸ್ ವ್ಯಾಸಂಗ ಮಾಡಬೇಕು ಎಂಬ ನಿಟ್ಟಿನಲ್ಲಿ ಹೆಚ್ಚು ಕೋಚಿಂಗ್ ಸೆಂಟರ್‌ಗಳನ್ನು ದೇಶಾದ್ಯಂತ ತೆರೆಯಲು ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಶೀಘ್ರದಲ್ಲೇ ಅದು ಈಡೇರುತ್ತದೆ ಎಂದರು.
ಜನರ ಋಣ ತೀರಿಸುತ್ತೇನೆ:
ಹುಟ್ಟೂರಾದ ಆನೇಕಲ್ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನರ ಋಣ ತೀರಿಸುತ್ತೇನೆ. ಹಿಂದೆ ಬಿಜೆಪಿ ಎಂದರೆ ಬ್ರಾಹ್ಮಣರ ಪಕ್ಷ ಎಂದು ಹೇಳುತ್ತಿದ್ದರು. ಆದರೆ ಮೊದಲ ಬಾರಿಗೆ ಸಂಸದನಾಗಿ ಆಯ್ಕೆಯಾದ ನನ್ನನ್ನು ಒಂದೇ ಬಾರಿಗೆ ಕೇಂದ್ರದಲ್ಲಿ ಸಚಿವನನ್ನಾಗಿ ಮಾಡಿದ್ದು ಬಿಜೆಪಿ ಎಂಬುದನ್ನು ಕಾಂಗ್ರೆಸ್ ಅರಿಯಬೇಕು ಎಂದು ನಾರಾಯಣಸ್ವಾಮಿ ಹೇಳಿದರು.
ಜನರ ಆಶೀರ್ವಾದದ ಮುಂದೆ ಯಾವುದೂ ಇಲ್ಲ, ನನ್ನನ್ನು ಇದುವರೆಗೆ ಬೆಳೆಸಿರುವುದು ಆನೇಕಲ್ ಕ್ಷೇತ್ರದ ಜನ, ತಾಲೂಕಿನ ಜನರ ಹಿತ ಕಾಯುವ ಕೆಲಸವನ್ನು ಮುಂದೆಯೂ ಮಾಡುತ್ತೇನೆ ಎಂದರು.
ಬಿಜೆಪಿ ಹಿರಿಯ ನಾಯಕ ಯಂಗಾರೆಡ್ಡಿ ಮಾತನಾಡಿದರು. ಚಂದಾಪುರ ವೃತ್ತದಲ್ಲಿ ಅಭಿಮಾನಿಗಳು ಸೇಬಿನ ಹಾರ ಹಾಕಿ ಸ್ವಾಗತಿಸಿದರು.
ದಾರಿಯುದ್ದಕ್ಕೂ ಜನಸಾಗರ: 11 ಗಂಟೆಗೆ ವೀರಸಂದ್ರ ಸಿಗ್ನಲ್ ಬಳಿ ಪ್ರಾರಂಭಗೊಂಡ ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಆನೇಕಲ್ ಪಟ್ಟಣಕ್ಕೆ ಬರುವವರೆಗೂ ರಸ್ತೆಯುದ್ದಕ್ಕೂ ಜನಸಾಗರವೇ ನೆರೆದಿತ್ತು. ಕಾರ್ಯಕರ್ತರು ಮಾಸ್ಕ್ ಧರಿಸದೆ ಭಾಗವಹಿಸಿದ್ದರು. ಸೆಲ್ಫಿ ತೆಗೆದುಕೊಳ್ಳಲು ಕಾರ್ಯಕರ್ತರು ಹಾಗೂ ಮುಖಂಡರು ಮುಗಿಬಿದ್ದರು.
ಯಾತ್ರೆ ಚಂದಾಪುರದಿಂದ ಆನೇಕಲ್‌ಗೆ ಬರುವಾಗ ಕೇಸರಿ ಬಣ್ಣದ ಶಾಲುಹೊದ್ದ ಕಾರ್ಯಕರ್ತರು ಪಟ್ಟಣದ ಶ್ರೀರಾಮ ಕುಟೀರದವರೆಗೆ ಆಗಮಿಸಿದರು. ಮಧ್ಯಾಹ್ನ 11 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಡೆದ ಜನಾಶೀರ್ವಾದ ಜಾತ್ರೆಯಲ್ಲಿ ಕಾರ್ಯಕರ್ತರು ಕಿಕ್ಕಿರಿದಿದ್ದರು.
ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಉಪಾಧ್ಯಕ್ಷ ಕೆ.ವಿ.ಶಿವಪ್ಪ, ಆನೇಕಲ್ ವಿಧಾನಸಭಾ ಕ್ಷೇತ್ರ ಮಂಡಲ ಅಧ್ಯಕ್ಷರಾದ ದೊಡ್ಡಹಾಗಡೆ ಶಂಕರ್, ಸುರೇಶ್‌ರೆಡ್ಡಿ, ಎಸ್‌ಆರ್‌ಟಿ ಅಶೋಕ್ ರೆಡ್ಡಿ, ಎಸ್‌ಟಿಆರ್‌ಆರ್ ನಿಗಮ-ಮಂಡಳಿ ಅಧ್ಯಕ್ಷ ಸಿ.ಮುನಿರಾಜು, ಮುಖಂಡರಾದ ಕೆ.ಸಿ.ರಾಮಚಂದ್ರ, ಹುಲ್ಲಳ್ಳಿ ಶ್ರೀನಿವಾಸ್, ಟಿ.ವಿ.ಬಾಬು, ಬಂಡಾಪುರ ರಾಮಚಂದ್ರ, ಮುನಿರಾಜುಗೌಡ, ಬಳ್ಳೂರು ವಸಂತರೆಡ್ಡಿ, ಸಾವ ಪ್ರಕಾಶ್, ತಿಮ್ಮರಾಜು, ಬಿ.ನಾಗರಾಜ್, ಸುರೇಶ್, ಶ್ರೀಧರ್ ರೆಡ್ಡಿ, ಮಹಿಳಾ ಮುಖಂಡರಾದ ಮುನಿರತ್ನ ತೇಜಸ್ವಿನಿ ನಟರಾಜ್ ಮತ್ತಿತರರು ಹಾಜರಿದ್ದರು.