ವಿಜಯವಾಣಿ ಸುದ್ದಿಜಾಲ ಆನೇಕಲ್
ಮೈಸೂರು ದಸರಾ ಮಾದರಿಯಲ್ಲಿಯೇ ಪಟ್ಟಣದ ತಿಲಕ್ ವೃತ್ತದಲ್ಲಿನ ಶ್ರೀಕ್ಷೇತ್ರ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ವಿಜಯ ದಶಮಿ ಉತ್ಸವದ ಅಂಗವಾಗಿ 9 ದಿನಗಳು ನಡೆಯುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಶನಿವಾರ ಚಾಲನೆ ದೊರಕಿತು.
ಆನೇಕಲ್‌ನಲ್ಲಿ ಹಲವು ವರ್ಷಗಳಿಂದ ಚೌಡೇಶ್ವರಿ ದೇವಿಯ ವಿಜಯ ದಶಮಿ ಉತ್ಸವ ವಿಜೃಂಭಣೆಯಿಂದ ಆಚರಿಸಕೊಂಡು ಬರಲಾಗುತ್ತಿದೆ. ಆನೇಕಲ್ ವಿಜಯದಶಮಿ ಉತ್ಸವ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ ಎಂದ ನಟಿ ತಾರಾ, ಈ ತಾಲೂಕಿನಲ್ಲಿಯೇ ನಾನು ಜನಿಸಿರುವುದರಿಂದ ಆನೇಕಲ್ ಮೇಲೆ ಅಪಾರ ಹೆಮ್ಮೆ ಇದೆ ಎಂದರು.
ಮುಖಂಡ ಉಲ್ಲಾಸ್ ಶಿವಣ್ಣ ಮಾತನಾಡಿ, ಆನೇಕಲ್ ಚೌಡೇಶ್ವರಿ ದೇವಾಲಯ ಸೇವಾ ಸಮಿತಿಯು ಹಲವು ವರ್ಷಗಳಿಂದ ದಸರಾ ಉತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿ ಆಚರಿಸಿಕೊಂಡು ಬರುತ್ತಿರುವುದು ಸಂತಸದ ವಿಚಾರ ಎಂದರು.
ಪುರಸಭೆ ಸದಸ್ಯರಾದ ರಾಜೇಂದ್ರ ಪ್ರಸಾದ್, ಸುರೇಶ್ ಬಾಬು, ಚೌಡೇಶ್ವರಿ ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಕೆ.ಶ್ರೀನಿವಾಸ್, ಮುನಿರಾಜು ಸತ್ಯನಾರಾಯಣ ಇದ್ದರು.
ದಸರಾ ಹಿನ್ನೆಲೆಯಲ್ಲಿ ಪಟ್ಟಣದೆಲ್ಲೆಡೆ ವಿದ್ಯುತ್ ದೀಪಗಳ ಅಲಂಕಾರದಿಂದ ಪಟ್ಟಣ ಜಗಮಗಿಸುತ್ತಿದೆ. ಪಟ್ಟಣದ ಎಲ್ಲ ಬೀದಿಗಳು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದ್ದು, ನವರಾತ್ರಿಯ ವೈಭವಕ್ಕೆ ಸಾಕ್ಷಿಯಾಗಿದೆ.
ಚೌಡೇಶ್ವರಿ ದೇವಾಲಯದಲ್ಲಿ ದೇವಿಗೆ ನವರಾತ್ರಿಯ 9 ದಿನಗಳಲ್ಲಿ ವಿಶೇಷ ಅಲಂಕಾರ ಮಾಡಿ ದೇವಿಯನ್ನು ಪೂಜಿಸಲಾಗುತ್ತಿದೆ. ಚೌಡೇಶ್ವರಿ ದೇವಿಗೆ ನವರಾತ್ರಿ ಪ್ರಯುಕ್ತ ಗುರುವಾರ ಶೈಲಪುತ್ರಿ ಮತ್ತು ಶುಕ್ರವಾರ ಕಾತ್ಯಾಯಿನಿ ಅಲಂಕಾರ ಏರ್ಪಡಿಸಲಾಗಿತ್ತು. ಉಮಾ ಚಂದ್ರಶೇಖರ್ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ: ಅ.6 ಕುಷ್ಮಾಂಡ, ಅ.7 ಸ್ಕಂದ ಮಾತಾ, ಅ.8 ಮಹಾಗೌರಿ, ಅ.9 ಸರಸ್ವತಿ, ಅ.10 ಕಾಳರಾತ್ರಿ, ಅ.11 ಸಿದ್ಧಿಧಾತ್ರಿ, ಅ.12 ಸರ್ವಾಲಂಕೃತ ಚೌಡೇಶ್ವರಿ ದೇವಿಯನ್ನು ಅಲಂಕರಿಸಲಾಗುವುದು. ಪ್ರತಿದಿನ ಸಂಜೆ 7ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.6ರಂದು ಅನ್ನಮಯ್ಯ ಸಂಕೀರ್ತನೆಗಳು, ಅ.7ರಂದು ರೀಬಾರ್ನ್ ಟೀಮ್ ವತಿಯಿಂದ ನೃತ್ಯ, ಅ.8ರಂದು ಸುಗಮ ಸಂಗೀತ, ಅ.9ರಂದು ಗಾನ ಕಲಾ ವೃಂದದಿಂದ ಸಂಗೀತ, ಅ.10ರಂದು ಭಕ್ತಿ ಭಾವ ಸಂಗಮ ಗೀತಾ ಗಾಯನ, ಅ.11ರಂದು ಭರತನಾಟ್ಯ, ಅ.12 ವಿಜಯದಶಮಿಯ ಪ್ರಯುಕ್ತ ನಾದಸ್ವರ ಕಚೇರಿ ಆಯೋಜಿಸಲಾಗಿದೆ ಎಂದು ತಿಳಿಸಿದರು.