ವಿಜಯವಾಣಿ ಸುದ್ದಿಜಾಲ ಆನೇಕಲ್
ಆನೇಕಲ್ ಪುರಸಭೆ ಚುನಾವಣೆ ಬಳಿಕ ಕ್ಷೇತ್ರದ ಬಿಜೆಪಿ ಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಅತ್ತಿಬೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಕ್ಷ ಸಂಘಟನೆ ಬಗ್ಗೆ ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡುತ್ತಿದ್ದಾಗ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡಿರುವ ಹುಲ್ಲಳ್ಳಿ ಶ್ರೀನಿವಾಸ್ ವೇದಿಕೆ ಮೇಲೆ ಹೋದರು. ಇದಾದ ಸ್ವಲ್ಪ ಹೊತ್ತಿನ ಬಳಿಕ ಬಿಜೆಪಿ ಮುಖಂಡ, ಆನೇಕಲ್ ಪುರಸಭೆಯ ಬಿಜೆಪಿ ಅಭ್ಯರ್ಥಿಯಾಗಿದ್ದ ಶಾಮಲಾ ಅವರ ಪತಿ ಬಿ.ನಾಗರಾಜು, ಹುಲ್ಲಳ್ಳಿ ಶ್ರೀನಿವಾಸ್ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಇವರು ಪಕ್ಷದ ವಿರೋಧಿ ಎಂದರು. ಈ ವೇಳೆ ಸಭೆಯಲ್ಲಿ ಮಾತಿನ ಚಕಮಕಿ ನಡೆದು ಗೊಂದಲದ ಗೂಡಾಯಿತು.
ಕೂಡಲೇ ಎ.ನಾರಾಯಣಸ್ವಾಮಿ ವೇದಿಕೆಯಿಂದ ಇಳಿದು ಹೊರಡಲು ಮುಂದಾಗುತ್ತಿದ್ದಂತೆ ಅವರ ಜತೆಯಲ್ಲಿದ್ದವರೆಲ್ಲ ವೇದಿಕೆಯಿಂದ ನಿರ್ಗಮಿಸಿದರು. ವೇದಿಕೆ ಮೇಲಿದ್ದ ಬೆಂಗಳೂರು ನಗರ ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಮೂರ್ತಿ ಹಲವು ಬಾರಿ ವೇದಿಕೆಗೆ ಬರುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.
ಕೆಲವು ಕಾರ್ಯಕರ್ತರು ಹಾಗೂ ಮುಖಂಡರು ಹುಲ್ಲಳ್ಳಿ ಶ್ರೀನಿವಾಸ್ ಹಾಗೂ ನಾರಾಯಣಸ್ವಾಮಿ ಅವರ ಬಳಿ ಮಾತುಕತೆ ನಡೆಸಲು ಮುಂದಾದರೂ ಪ್ರಯೋಜನ ಆಗದೆ ಸದಸ್ಯತ್ವ ಅಭಿಯಾನ ಪ್ರಾರಂಭದಲ್ಲೇ ಮೊಟಕಗೊಂಡಿತು.
ಬಂಡಾಯದ ಬೇಗುದಿ: ಇತ್ತೀಚೆಗೆ ಆನೇಕಲ್ ಪುರಸಭೆಗೆ ಚುನಾವಣೆ ನಡೆದಿತ್ತು. ಬಿಜೆಪಿಯಿಂದ ಅಧಿಕೃತ ಅಭ್ಯರ್ಥಿಯಾಗಿ ಶಾಮಲಾ ಬಿ. ನಾಗರಾಜು ಆಯ್ಕೆಯಾಗಿದ್ದರು. ಆದರೆ ಕೊನೆಯ ಹಂತದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸುಧಾ ನಿರಂಜನ್ ನಾಮಪತ್ರ ಸಲ್ಲಿಸಿ ಕಾಂಗ್ರೆಸ್ ಬೆಂಬಲ ಪಡೆದು ಅಧ್ಯಕ್ಷರಾದರು, ಇದಾದ ಬಳಿಕ ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹಾಗೂ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ, ಜಯನಗರ ಶಾಸಕ ರಾಮಮೂರ್ತಿ ಸುದ್ದಿಗೋಷ್ಠಿ ನಡೆಸಿ ಸುಧಾ ನಿರಂಜನ್ ಹಾಗೂ ಇವರಿಗೆ ಬೆಂಬಲ ನೀಡಿದ್ದ ಪುರಸಭಾ ಬಿಜೆಪಿ ಸದಸ್ಯ ಸುರೇಶ್ ಅವರನ್ನು ಉಚ್ಚಾಟನೆ ಮಾಡಿದ್ದರು.
ಕಾರ್ಯಕರ್ತರು ಅನಾಥ: ತಾಲೂಕು ಬಿಜೆಪಿಯಲ್ಲಿ ಎ.ನಾರಾಯಣಸ್ವಾಮಿ ಬಣ, ಹುಲ್ಲಳ್ಳಿ ಶ್ರೀನಿವಾಸ್ ಬಣಗಳ ಮುಖಂಡರ ನಡುವೆ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಯಾರ ಜತೆಗೆ ಹೋಗಬೇಕು? ಪಕ್ಷ ಸಂಘಟನೆ ಹೇಗೆ ಮಾಡಬೇಕು ಎನ್ನುವ ಗೊಂದಲ ನಿರ್ಮಾಣವಾಗಿದೆ.
ಶಿಸ್ತಿನ ಪಕ್ಷದಲ್ಲಿ ಗೊಂದಲ: ಆನೇಕಲ್ ತಾಲೂಕಿನಲ್ಲಿ ಬಿಜೆಪಿ ಶಿಸ್ತಿನ ಪಕ್ಷ ಅಂತ ಹೇಳಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿಯಲ್ಲಿ ಬಣಗಳು ಹೆಚ್ಚಾಗುತ್ತಿದ್ದು, ಶಿಸ್ತಿನ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಪದೇಪದೇಸಾಬೀತಾಗುತ್ತಿದೆ.
ಶಾಸಕ ಸ್ಥಾನದ ಅಭ್ಯರ್ಥಿಗೆ ಪೈಪೋಟಿ: ಆನೇಕಲ್ ತಾಲೂಕಿನಲ್ಲಿ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಹುಲ್ಲಳ್ಳಿ ಶ್ರೀನಿವಾಸ್ ಪರಾಜಿತಗೊಂಡಿದ್ದರು. ಈ ಸಂದರ್ಭದಲ್ಲಿ ಹಲವವರು ಆಕಾಂಕ್ಷಿಗಳಾಗಿದ್ದರು, ಈಗ ಮತ್ತೆ ಆನೇಕಲ್ ತಾಲೂಕಿನಲ್ಲಿ ನಾರಾಯಣಸ್ವಾಮಿ ಸಕ್ರಿಯರಾಗುತ್ತಿದ್ದಂತೆ ಮುಂದಿನ ಶಾಸಕ ಸ್ಥಾನ ಯಾರಿಗೆ ಎನ್ನುವ ಕುರಿತು ಪೈಪೋಟಿ ಪ್ರಾರಂಭ ಆಗಿದೆ.
ಆನೇಕಲ್ ಪುರಸಭೆಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಮೇಲೆ ಪಕ್ಷ ಉಚ್ಚಾಟನೆ ಶಿಕ್ಷೆ ನೀಡಿದೆ. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಆನೇಕಲ್ ತಾಲೂಕಿನಲ್ಲಿ ಗೊಂದಲಮಯ ವಾತಾವರಣ ಸೃಷ್ಟಿ ಆಗದೆ ಎಲ್ಲವನ್ನೂ ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ.ಎ.ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ ಯಾವುದೇ ರೀತಿ ಪಕ್ಷ ವಿರೋಧಿ ಚಟುವಟಿಕೆ ಕೆಲಸ ಮಾಡಿಲ್ಲ. ಆದರೆ ಕೆಲವರು ಆನೇಕಲ್ ತಾಲೂಕಿನಲ್ಲಿ ನನಗೆ ಪಕ್ಷದಲ್ಲಿ ಹಿನ್ನಡೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಇಷ್ಟು ದಿನ ಸಹಿಸಿಕೊಂಡು ಬಂದಿದ್ದೇನೆ. ಇನ್ನು ಮುಂದೆ ನಾನೂ ಅದಕ್ಕೆ ಕೊಡಬೇಕಾದ ಉತ್ತರ ಕೊಡುತ್ತೇನೆ.ಹುಲ್ಲಳ್ಳಿ ಶ್ರೀನಿವಾಸ್ಬಿಜೆಪಿ ಪರಾಜಿತ ಅಭ್ಯರ್ಥಿ