ಆನೇಕಲ್: ಕೇಂದ್ರ ಸಚಿವ ಸಂಪುಟದಲ್ಲಿ ಆನೇಕಲ್ ಪುತ್ರ ಎಂದೇ ಖ್ಯಾತರಾದ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಸ್ಥಾನ ದೊರಕಿರುವುದು ತಾಲೂಕಿನ ಬಿಜೆಪಿ ಪಾಳಯದ ಸಂತಸವನ್ನು ಇಮ್ಮಡಿಗೊಳಿಸಿದೆ. ಅಲ್ಲದೇ ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಬರೋಬ್ಬರಿ 49 ವರ್ಷಗಳ ಬಳಿಕ ನಾರಾಯಣ ಸ್ವಾಮಿ ಅವರ ಮೂಲಕ ಕೇಂದ್ರದಲ್ಲಿ ಸಚಿವಗಿರಿ ಸಿಕ್ಕಿದೆ.
ಸಚಿವ ಸ್ಥಾನ ದೊರಕುವ ಮುನ್ಸೂಚನೆ ಹಿನ್ನೆಲೆಯಲ್ಲಿ ನಾರಾಯಣ ಸ್ವಾಮಿ ಅವರು ಮಂಗಳವಾರವೇ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಮನೆಯಿಂದ ಪತ್ನಿ, ಮಕ್ಕಳೊಂದಿಗೆ ಖಾಸಗಿ ವಿಮಾನದಲ್ಲಿ ದೆಹಲಿಗೆ ತೆರಳಿದ್ದರು.
ದಲಿತ ಮುಖಂಡನಿಗೆ ಮಣೆ: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ತಮ್ಮ ಸಂಪುಟ ಮರುರಚನೆಯಲ್ಲಿ ಎಸ್‌ಸಿ ಎಡಗೈ ಸಮುದಾಯದ ನಾಯಕನಿಗೆ ಸ್ಥಾನ ನೀಡಿದ್ದಾರೆ. ಆನೇಕಲ್‌ನ ಬಡ ಚಮ್ಮಾರನ ಪುತ್ರ ಎ. ನಾರಾಯಣಸ್ವಾಮಿ ಅವರು ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮೂಲಕ ಆರ್‌ಎಸ್‌ಎಸ್‌ನೊಂದಿಗೆ ಗುರುತಿಸಿಕೊಂಡವರು.1996ರಲ್ಲಿ ಆನೇಕಲ್ ಪುರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಕ್ರಿಯ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಆನೇಕಲ್ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿದ್ದವರು. ಒಮ್ಮೆ ಸಮಾಜ ಕಲ್ಯಾಣ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ನನೆಗುದಿಗೆ ಬಿದ್ದಿದ್ದ ಸಮಾಜ ಕಲ್ಯಾಣ ಇಲಾಖೆಯ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. 2019ರಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಆಮೆ ವೇಗದಲ್ಲಿ ತೆರಳುತ್ತಿದ್ದ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನವನ್ನು ಚುರುಕುಗೊಳಿಸಿದ್ದಲ್ಲದೆ, ಹಲವು ಒಳ್ಳೆಯ ಕೆಲಸಗಳನ್ನು ಮಾಡಿ, ಜನಮನ್ನಣೆಗೆ ಪಾತ್ರರಾಗಿದ್ದಾರೆ. ಅಬ್ಬಯ್ಯ ಹಾಗೂ ತಿಮ್ಮಕ್ಕ ದಂಪತಿಯ ಪುತ್ರ ನಾರಾಯಣ ಸ್ವಾಮಿ ಆನೇಕಲ್‌ನಲ್ಲಿ 1957ರ ಮೇ 16 ರಂದು ಜನಿಸಿದರು. ಬಿಎ ಪದವಿ ಪಡೆದಿರುವ ಇವರು ರಾಜಕೀಯದ ಜತೆಗೆ ಕೃಷಿ , ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಮ್ಮ ತಂದೆ ಸರಳತೆಗೆ ಹೆಸರಾದವರು. ಎಂದೂ ಅಧಿಕಾರದ ಹಿಂದೆ ಹೋದವರಲ್ಲ, ಬಿಜೆಪಿ ಸಿದ್ಧಾಂತದ ವಿರುದ್ಧ ನಡೆದವರಲ್ಲ. ಇದರಿಂದಾಗಿಯೇ ಮೋದಿ ಅವರ ಸಚಿವ ಸಂಪುಟ ಸೇರಲು ಸಾಧ್ಯವಾಗಿದೆ. ನಮಗೆ ತುಂಬ ಸಂತೋಷವಾಗಿದೆ. ಕೌಶಲ್ಸ್ವಾಮಿ ಎ.ನಾರಾಯಣಸ್ವಾಮಿ ಪುತ್ರಿ ನಮ್ಮ ತಂದೆ ಮೋದಿಯವರ ಕಟ್ಟಾ ಅಭಿಮಾನಿ, ಪಕ್ಷವನ್ನೇ ತನ್ನ ದೇವರೆಂದುಕೊಂಡಿರುವವರು. ಚಿತ್ರದುರ್ಗ ಲೋಕಸಭಾ ಕ್ಷೇತ್ರ ಹಾಗೂ ಆನೇಕಲ್ ತಾಲೂಕಿನ ಜನರ ಆಶೀರ್ವಾದ ಅವರನ್ನು ದೆಹಲಿಯವರೆಗೆ ಕಳುಹಿಸಿಕೊಟ್ಟಿದೆ, ಜನರ ಋಣದಿಂದ ನಾವು ಇಲ್ಲಿಯವರೆಗೆ ಬಂದಿದ್ದೇವೆ. ಸಿರೀಶಾಸ್ವಾಮಿ, ನಾರಾಯಣಸ್ವಾಮಿ ಕಿರಿಯ ಪುತ್ರಿ ಇನ್ನೊಬ್ಬರ ಮೇಲೆ ದ್ವೇಷ ಸಾಧಿಸುವ ಮನೋಭಾವವನ್ನು ಯಾರು ಹೊಂದಿರುವುದಿಲ್ಲವೋ ಅವರು ಒಂದಲ್ಲ ಒಂದು ದಿನ ಉನ್ನತ ಹುದ್ದೆಗೆ ಹೋಗುತ್ತಾರೆ ಎನ್ನುವುದಕ್ಕೆ ನಮ್ಮ ತಂದೆಯೇ ಸಾಕ್ಷಿ. ಅವರು ಜನರ ಜತೆ ಯಾವಾಗಲೂ ಅಣ್ಣತಮ್ಮಂದಿರಂತೆ ಇರುತ್ತಾರೆ. ಸೋತಾಗಲೂ ಅವರು ನೊಂದವರಲ್ಲ. ಅವರ ಒಳ್ಳೆಯ ಮನಸ್ಸು ಪಕ್ಷ ನಿಷ್ಠೆ ಮೋದಿ ಅವರ ಸಚಿವ ಸಂಪುಟ ಸೇರುವ ಹಂತಕ್ಕೆ ಕರೆದೊಯ್ದಿದೆ. ಶೀತಲ್ ಸ್ವಾಮಿ ನಾರಾಯಣಸ್ವಾಮಿ ಹಿರಿಯ ಪುತ್ರಿ