????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಆನೇಕಲ್: ಗಡಿಯಲ್ಲಿ ವಾಹನಗಳಿಗೆ ತಡೆ; ತಮಿಳುನಾಡಿನ ನಗರ ಪ್ರವೇಶಕ್ಕೆ ರಾಜ್ಯ ಸರ್ಕಾರ ನಕಾರ; ಕ್ವಾರಂಟೈನ್‌ಗೊಳಪಟ್ಟರಷ್ಟೇ ಅನುಮತಿ

ಆನೇಕಲ್: ತಮಿಳುನಾಡು-ಕರ್ನಾಟಕ ಗಡಿಭಾಗದಲ್ಲಿ ರಾಜ್ಯ ಪ್ರವೇಶಿಸುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಎಚ್ಚೆತ್ತಿರುವ ಸರ್ಕಾರ ಬೆಂಗಳೂರಿಗೆ ಪ್ರವೇಶಿಸುವ ಎಲ್ಲ ವಾಹನಗಳನ್ನು ತಡೆಯಲು ಮುಂದಾಗಿದೆ.

ಸ್ಟೇಷನ್ ಲೆವಲ್ ಪಾಸ್ ಪಡೆದು ತಮಿಳುನಾಡಿನಿಂದ ಜನರು ರಾಜ್ಯಕ್ಕೆ ಕಾಲಿಡುತ್ತಿದ್ದಾರೆ. ಆದರೆ ಅಂಥವರ ಪ್ರವೇಶ ನಿರ್ಬಂಧಿಸಲು ಮುಂದಾಗಿರುವ ರಾಜ್ಯ ಪೊಲೀಸರು, ಎಸ್ಪಿ, ಜಿಲ್ಲಾಧಿಕಾರಿಗಳ ಅನುಮತಿ ಪಾಸ್ ಇದ್ದರಷ್ಟೆ ಪ್ರವೇಶಕ್ಕೆ ಅವಕಾಶ ಕೊಡುತ್ತಿದ್ದಾರೆ. ಇದರಿಂದ ಗಡಿಭಾಗದಲ್ಲಿ ಪೊಲೀಸರು ಹಾಗೂ ಜನರ ನಡುವೆ ಪ್ರತಿನಿತ್ಯ ಮಾತಿನ ಚಕಮಕಿ ನಡೆಯುತ್ತಿದೆ.

ಅತ್ತಿಬೆಲೆ ಗಡಿಯಲ್ಲಿ ಸೋಮವಾರ ತಮಿಳುನಾಡಿನಿಂದ ಸಾಕಷ್ಟು ವಾಹನಗಳು ಬಂದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾಜ್ಯಕ್ಕೆ ಹೋಲಿಸಿದರೆ ತಮಿಳುನಾಡಿನಲ್ಲಿ ಕರೊನಾ ನರ್ತನ ತೀವ್ರವಾಗಿದೆ.

ತಮಿಳುನಾಡು ಸರ್ಕಾರ ಮೂರು ದಿನಗಳಿಂದ ಹೊರ ರಾಜ್ಯದ ಕಾರ್ಮಿಕರನ್ನು ಲಾರಿಗಳ ಮೂಲಕ ಮಹಾರಾಷ್ಟ್ರ ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸಿಕೊಡುತ್ತಿದೆ. ಇದರಿಂದಾಗಿ ಅತ್ತಿಬೆಲೆ ಟೋಲ್‌ನಿಂದ ತಮಿಳುನಾಡಿನ ಸಿಪ್ಕಾಟ್‌ವರೆಗೆ ಟ್ರಾಫಿಕ್ ಜಾಮ್ ಆಗುತ್ತಿದೆ.

ಡಿಸಿ ಭೇಟಿ: ಗಡಿಭಾಗದಲ್ಲಿ ಸೋಮವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಮತ್ತು ಉಪವಿಭಾಗ ಅಧಿಕಾರಿ ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮಿಳುನಾಡು ಸರ್ಕಾರದ ಜತೆ ಮಾತನಾಡಿದ್ದಾರೆ. ರಾಜ್ಯಕ್ಕೆ ಯಾವುದೇ ವಾಹನಗಳ ಪ್ರವೇಶಕ್ಕೆ ನಿರಾಕರಿಸಲಾಗಿದೆ. ಸರ್ಕಾರ ಇದಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಶಿವಮೂರ್ತಿ ತಿಳಿಸಿದರು. ತಮಿಳುನಾಡಿನಿಂದ ಬರುವವರು ಕ್ವಾರೆಂಟೈನ್‌ಗೆ ಒಳಪಡುವುದಾರೆ ಮಾತ್ರ ರಾಜ್ಯಕ್ಕೆ ಬಿಟ್ಟುಕೊಳ್ಳುತ್ತೇವೆ. ಇಲ್ಲವಾದರೆ ಎಲ್ಲ ವಾಹನಗಳನ್ನು ಗಡಿಯಿಂದ ಹಿಂದಕ್ಕೆ ಕಳುಹಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಫೀಲ್ಡ್‌ಗಿಳಿದ ಎಸಿ ಶಿವಣ್ಣ: ಫೀಲ್ಡ್‌ಗಿಳಿದ ಎಸಿ ಶಿವಣ್ಣ ವಾಹನಗಳ ಪಾಸ್ ಪರಿಶೀಲಿಸಿದರು. ವಾಹನ ಸವಾರರೊಂದಿಗೆ ಮಾತುಕತೆ ನಡೆಸಿ ವಾಹನಗಳನ್ನು ಹಿಂದಕ್ಕೆ ಕಳುಹಿಸುವ ಮೂಲಕ ವಾಹನದಟ್ಟನೆ ತೆರವುಗೊಳಿಸಿದರು. ಆನೇಕಲ್ ಭಾಗದ ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತಿತರ ಅಧಿಕಾರಿಗಳೂ ಬೆಳಗ್ಗೆ 6 ಗಂಟೆಯಿಂದಲೇ ಅತ್ತಿಬೆಲೆ ಗಡಿಯಿಂದ ಸಾವಿರಾರು ವಾಹನಗಳನ್ನು ತಮಿಳುನಾಡಿಗೆ ವಾಪಸ್ ಕಳುಹಿಸಿದರು. ತಮಿಳುನಾಡಿನ ಕಡೆಯಿಂದ ಬೇರೆ ಬೇರೆ ಜಿಲ್ಲೆಗಳಿಗೆ ಮತ್ತು ಬೇರೆ ಬೇರೆ ರಾಜ್ಯಗಳಿಗೆ ಪಾಸ್ ಇದ್ದರೆ ಮಾತ್ರ ಹೋಗುವುದಕ್ಕೆ ಅವಕಾಶವಿದ್ದು ಅಂಥವರು ಮತ್ತು ಮೆಡಿಕಲ್ ಎಮರ್ಜೆನ್ಸಿ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿರುವುದಾಗಿ ಶಿವಣ್ಣ ತಿಳಿಸಿದರು.

ಡಿವೈಎಸ್‌ಪಿ ನಂಜುಂಡೇಗೌಡ, ವೃತ್ತ ನಿರೀಕ್ಷಕ ಸತೀಶ್, ಪಿಸ್‌ಐ ನವೀನ್, ತಾಲೂಕು ಆರೋಗ್ಯಾಧಿಕಾರಿ ಜ್ಞಾನಪ್ರಕಾಶ್ ಮತ್ತಿತರರು ಇದ್ದರು.