ಜಿಲ್ಲೆ

ಆನೇಕಲ್ ಕೆರೆ ಪರಿಶೀಲಿಸಿದ ಹಸಿರೀಕರಣ ಸಮಿತಿ, ಪರೀಕ್ಷೆಗಾಗಿ ವಿವಿಧ ಕೆರೆಯ ನೀರು ಸಂಗ್ರಹ, ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಸ್ಥಳೀಯರ ಬೇಸರ

ಆನೇಕಲ್: ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರನ್ನು ಶುದ್ಧೀಕರಿಸದೆ ಕೆರೆಗೆ ಹರಿ ಬಿಡಲಾಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರೀಕರಣ ಸಮಿತಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ತಂಡ ಮಂಗಳವಾರ ಆನೇಕಲ್ ತಾಲೂಕಿನ ವಿವಿಧ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೆರೆ ನೀರನ್ನು ಪರೀಕ್ಷೆಗೆ ತೆಗೆದುಕೊಂಡು ಸಂಗ್ರಹಿಸಿತು.

ತಾಲೂಕಿನ ಬಹುತೇಕ ಕೆರೆಗಳು ತ್ಯಾಜ್ಯದಿಂದ ವಿಷಯುಕ್ತವಾಗಿದ್ದು, ಕೆರೆಯೊಡಲಲ್ಲಿ ನೀರಿದ್ದರೂ ಬಳಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಕೆರೆ ಅವ್ಯವಸ್ಥೆ ಕುರಿತು ವಿಜಯವಾಣಿ ಸರಣಿ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.

ಈ ಹಿನ್ನೆಲೆಯಲ್ಲಿ ಕೇಂದ್ರೀಯ ಹಸಿರೀಕರಣ ಸಮಿತಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳ ತಂಡ ಜಿಗಣಿ ಕೈಗಾರಿಕಾ ಪ್ರದೇಶದ ಜಿಗಣಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿತು. ಕೆರೆಯ ನೀರನ್ನು ತಪಾಸಣೆಗಾಗಿ ಸಂಗ್ರಹಿಸಿದರು.

ಹಲವಾರು ಇಲಾಖೆ ಅಧಿಕಾರಿಗಳು ಇದೇ ಮೊದಲ ಬಾರಿಗೆ ಕೆರೆಗಳ ಪರಿಶೀಲನೆಗೆ ಆಗಮಿಸಿದ್ದು, ಈ ಬಾರಿಯಾದರೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಳ್ಳಾಟ ನಡೆಸದೆ ಕೆರೆಗಳ ಉಳಿವಿಗೆ ಸಹಕಾರ ನೀಡಬೇಕು ಎಂದು ಸ್ಥಳೀಯ ಕಿರಣ್ ಆಗ್ರಹಿಸಿದರು.

ಶುದ್ಧ ನೀರು ತೋರಿದ್ದಕ್ಕೆ ವಿರೋಧ: ಬಳಿಕ ಹೆನ್ನಾಗರ ಕೆರೆ ಪರಿಶೀಲನೆ ವೇಳೆ ತ್ಯಾಜ್ಯ ಇರುವ ಕಡೆ ಬಿಟ್ಟು ಶುದ್ಧವಾದ ನೀರನ್ನು ಮಾಲಿನ್ಯ ಮಂಡಳಿ ಅಧಿಕಾರಿಗಳು ತೋರಿಸಲು ಮುಂದಾದರು. ಈ ವೇಳೆ ಸಾರ್ವಜನಿಕರು ಹಾಗೂ ಗ್ರಾಪಂ ಪ್ರತಿನಿಧಿಗಳು, ವಿರೋಧ ವ್ಯಕ್ತಪಡಿಸಿದರು. ಬಳಿಕ ಮಾಸ್ತೇನಹಳ್ಳಿ ಕೆರೆ ಹಾಗೂ ಯಾರಂಡಹಳ್ಳಿ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೂ ನೀರನ್ನು ಸಂಗ್ರಹಿಸಲಾಯಿತು.

ಕೈಗಾರಿಕೆಗಳಲ್ಲಿ ಸಂಸ್ಕರಣೆಗೆ ನಿರ್ಲಕ್ಷ್ಯ: ಜಿಗಣಿ ಕೈಗಾರಿಕಾ ಪ್ರದೇಶದಿಂದ ಕಲುಷಿತ ನೀರನ್ನು ಸಂಸ್ಕರಿಸದೆ ಕೆರೆಗಳಿಗೆ ಬಿಡಲಾಗುತ್ತಿದೆ. ಜಿಗಣಿ ಕೆರೆಯ ಮೂಲಕ ಹೆನ್ನಾಗರ, ಚಂದಾಪುರ ಕೆರೆ ಹೀಗೆ ಕೋಡಿ ಹರಿದು ಬಹುತೇಕ ಕೆರೆಗಳು ಕಲುಷಿತಗೊಂಡಿವೆ. ಇದಕ್ಕೆ ಕೈಗಾರಿಕೆಗಳೇ ಕಾರಣ ಎಂದು ಸ್ಥಳೀಯರು ದೂರಿದರು.

ಹೌಹಾರಿದ ಅಧಿಕಾರಿಗಳು: ಮಾಸ್ತೇನಹಳ್ಳಿ ಹಾಗೂ ಯಾರಂಡಹಳ್ಳಿ ಕೆರೆಗಳಿಗೆ ಭೇಟಿ ನೀಡಿದಾಗ ಕೆರೆಯಲ್ಲಿ ರಾಸಾಯನಿಕ ತ್ಯಾಜ್ಯ ತುಂಬಿದ್ದನ್ನು ನೋಡಿ ಸ್ವತಃ ರಾಷ್ಟ್ರೀಯ ಹಸಿರೀಕರಣ ಸಮಿತಿ ಅಧಿಕಾರಿಗಳು ದಂಗಾದರು.

ಮಾಸ್ತೇನಹಳ್ಳಿಯಲ್ಲಿ ತರಾಟೆ: ಮಾಸ್ತೇನಹಳ್ಳಿ ಕೆರೆಯ ಬಳಿ ಅಧಿಕಾರಿಗಳ ತಂಡ ಭೇಟಿ ನೀಡಿದಾಗ ಆಕ್ರೋಶ ವ್ಯಕ್ತಪಡಿಸಿದ ಜನರು, ಹಲವು ವರ್ಷಗಳಿಂದ ರಾಸಾಯನಿಕ ತ್ಯಾಜ್ಯ ನೀರು ಗ್ರಾಮದ ಮಧ್ಯದಲ್ಲಿ ಹರಿಯುತ್ತಿದೆ. ಜನರು ನಾನಾ ರೋಗರುಜಿನಗಳಿಂದ ಆಸ್ಪತ್ರೆಗೆ ಸೇರುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಸ್ಥಳೀಯರು ಕಷ್ಟ ಅನುಭವಿಸುವಂತಾಗಿದೆ ಎಂದು ಮಾಲಿನ್ಯ ಮಂಡಳಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಕ್ರಿಯೆ ನೀಡಲು ನಕಾರ: ಆಗಾಗ್ಗೆ ಕೆರೆಗಳ ಪರಿಶೀಲನೆ ನಡೆಸಿ ಸಾಕಷ್ಟು ಬಾರಿ ನೀರನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದ ವರದಿ ಏನಾಗಿದೆ ಎಂಬ ಪ್ರಶ್ನೆಗೆ ಮಾಲಿನ್ಯ ಮಂಡಳಿ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಇಂಡಿಯನ್ ಇನ್‌ಸ್ಟ್ಟಿಟ್ಯೂಟ್ ಆಫ್ ಸೈನ್ಸ್‌ನ ಅಧಿಕಾರಿ ಲಕ್ಷ್ಮೀನಾರಾಯಣ್, ದೆಹಲಿಯ ಮಿನಿಸ್ಟರಿ ಆಫ್ ಎನ್ವಿರಾನ್ಮೆಂಟ್ ಹಾಗೂ ಾರೆಸ್ಟ್ ಅಧಿಕಾರಿ ರವಿಕುಮಾರ್, ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿ ಅಂಜನಾ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಾದ ಆಸ್ಿ ಖಾನ್, ಮಂಜುನಾಥ್, ವಾಸುದೇವ್, ಭಾಸ್ಕರ್, ಎಡಿಎಲ್‌ಆರ್ ದಿಲೀಪ್, ಹೆನ್ನಾಗರ ಗ್ರಾಪಂ ಅಭಿವೃದ್ಧಿ ಅಧಿಕಾರಿ ತುಳಸಿನಾಥ್, ಗ್ರಾಪಂ ಉಪಾಧ್ಯಕ್ಷ ಪ್ರಸನ್ನಕುಮಾರ್, ಸದಸ್ಯರಾದ ಶಿವರಾಜ್, ಕಿರಣ್ ಮತ್ತಿತರರು ಇದ್ದರು.

ವರ್ಷದ ಹಿಂದೆಯೂ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವು ಕೆರೆಗಳಿಂದ ನೀರನ್ನು ಪರೀಕ್ಷೆಗೆಂದು ತೆಗೆದುಕೊಂಡು ಹೋಗಿದ್ದರು. ಆದರೆ ಇದುವರೆಗೂ ವರದಿ ನೀಡಿಲ್ಲ. ಈ ಬಾರಿ ರಾಷ್ಟ್ರೀಯ ಹಸಿರೀಕರಣ ಸಮಿತಿ ಆಗಮಿಸಿರುವುದರಿಂದ ಇನ್ನಾದರೂ ಕೈಗಾರಿಕೆಗಳಲ್ಲಿನ ತ್ಯಾಜ್ಯ ನೀರನ್ನು ಕೆರೆಗೆ ಹರಿಸುವುದನ್ನು ತಡೆಯಲು ಕ್ರಮ ಕೈಗೊಳ್ಳಲಿದಾರೆಯೇ ಎಂದು ಕಾದು ನೋಡುತ್ತೇವೆ. ಪ್ರಸನ್ನಕುಮಾರ್ ಹೆನ್ನಾಗರ ಗ್ರಾಪಂ ಉಪಾಧ್ಯಕ್ಷ ರಾಜಕಾಲುವೆಯಲ್ಲಿ ಬರುವ ನೀರನ್ನು ಪರೀಕ್ಷೆ ಮಾಡಿ ವರದಿ ನೀಡಬೇಕ. ಚಂದಾಪುರ ಕೆರೆಯಲ್ಲಿ ಸಾಕಷ್ಟು ರಾಸಾಯನಿಕ ತ್ಯಾಜ್ಯ ತುಂಬಿದ್ದು, ನಾವೇ ಪ್ರತ್ಯೇಕವಾಗಿ ನೀರನ್ನು ನೀಡುತ್ತೇವೆ. ಮಾಲಿನ್ಯ ಮಂಡಳಿ ವರದಿ ನೀಡುವ ಬಗ್ಗೆ ನಾವು ಕಾಯುತ್ತಿದ್ದೇವೆ. ಸಂತೋಷ್ ಕುಮಾರ್ ಮಾಜಿ ಯೋಧ