ಹನೂರು: ತಾಲೂಕಿನ ದಿನ್ನಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಕಾಡಾನೆಗಳ ಹಿಂಡು ಜಮೀನಿಗೆ ನುಗ್ಗಿ ಜೋಳದ ಫಸಲನ್ನು ನಾಶಪಡಿಸಿದ್ದರೆ ಇತ್ತ ಪೊನ್ನಾಚಿ ಗ್ರಾಮದಲ್ಲಿ ಪುಂಡಾನೆಯೊಂದು ಗ್ರಾಮಕ್ಕೆ ಲಗ್ಗೆ ಇಟ್ಟು ತೆಂಗಿನಮರವನ್ನು ನಾಶಗೊಳಿಸಿದೆ.
ದಿನ್ನಳ್ಳಿ ಗ್ರಾಮದಲ್ಲಿ ರಾತ್ರಿ ಕಾಡಾನೆಗಳ ಹಿಂಡು ಸೈಯದ್ ಗಫೂರ್ ಎಂಬವರ ಜಮೀನಿಗೆ ಲಗ್ಗೆ ಇಟ್ಟು 2 ಎಕರೆಯಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಫಸಲನ್ನು ತುಳಿದು ನಾಶಪಡಿಸಿದೆ. ಜತೆಗೆ ನೀರಾವರಿ ಪರಿಕರ ಹಾಗೂ ಕಾವಲು ಕಾಯಲು ನಿರ್ಮಿಸಿದ್ದ ಗುಡಿಸಲನ್ನು ಕೆಡವಿ ಹಾಕಿದೆ. ಇದರಿಂದ ನಷ್ಟ ಉಂಟಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಸೈಯದ್ ಗಫೂರ್ ಒತ್ತಾಯಿಸಿದ್ದಾರೆ.
ಜತೆಗೆ ಈ ಭಾಗದಲ್ಲಿ ಕಾಡಾನೆಗಳ ಹಿಂಡು ಆಗ್ಗಾಗ್ಗೆ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಇದರಿಂದ ಕೃಷಿಯಲ್ಲಿ ನಷ್ಟ ಅನುಭವಿಸುವಂತಾಗಿದೆ. ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇನ್ನು ಮುಂದಾದರೂ ಇತ್ತ ಗಮನಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತೆಂಗಿನಮರ ನಾಶ: ಇನ್ನು ಪೊನ್ನಾಚಿ ಗ್ರಾಮದ ಹೊರವಲಯದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಪುಂಡಾನೆಯೊಂದು ಮಂಗಳವಾರ ಬೆಳಗಿನ ವೇಳೆಯೇ ಗ್ರಾಮಕ್ಕೆ ಲಗ್ಗೆ ಇಟ್ಟಿದ್ದು, ಮನೆಯ ಮುಂಭಾಗವಿದ್ದ ತೆಂಗಿನಮರವನ್ನು ನಾಶಗೊಳಿಸಿದೆ. ಇದರಿಂದ ಗ್ರಾಮಸ್ಥರಲ್ಲಿ ಅತಂಕ ಮನೆ ಮಾಡಿದ್ದು, ಗ್ರಾಮದತ್ತ ಸುಳಿಯದಂತೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಚಿರತೆ ಸೆರೆಗೆ ಒತ್ತಾಯ: ತಾಲೂಕಿನ ಭೈರನತ್ತ ಗ್ರಾಮದಲ್ಲಿ ಏ.27ರ ರಾತ್ರಿ ಗ್ರಾಮದ ಪೊನ್ನುಸ್ವಾಮಿ ಎಂಬವರ ಜಮೀನಿಗೆ ಲಗ್ಗೆ ಇಟ್ಟು 2 ಕುರಿಗಳನ್ನು ಬಲಿ ತೆಗದುಕೊಂಡಿದ್ದ ಚಿರತೆ ಸೋಮವಾರ ರಾತ್ರಿ ಮುರುಗೇಶ್ ಎಂಬವರ ಜಮೀನಿಗೆ ಲಗ್ಗೆ ಇಟ್ಟು ಕೋಳಿಯೊಂದನ್ನು ತಿಂದು ಹಾಕಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ವ್ಯಕ್ತವಾಗಿದ್ದರೆ ತೋಟದ ನಿವಾಸಿಗಳು ತೀವ್ರ ಭಯಭೀತಗೊಂಡಿದ್ದಾರೆ. ಕುರಿಗಳನ್ನು ಬಲಿ ತೆಗೆದುಕೊಂಡಿದ್ದ ವೇಳೆ ಚಿರತೆ ಹಾವಳಿಗೆ ಕಡಿವಾಣ ಹಾಕುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಚಿರತೆ ಸೆರೆ ಹಿಡಿಯುವಂತೆ ಗ್ರಾಮದ ರಾಜು ಒತ್ತಾಯಿಸಿದ್ದಾರೆ.