ಹಾನಗಲ್ಲ: ಪಟ್ಟಣದ ಜನತೆಯ ಕುಡಿಯುವ ನೀರಿನ ಜಲಾಗಾರವಾಗಿರುವ ಆನೆಕೆರೆ ಮುಂಗಾರಿನ ಮಳೆಯಿಂದ ತುಂಬಿದ್ದು, ಪುರಸಭೆ ವತಿಯಿಂದ ಅಧ್ಯಕ್ಷ-ಉಪಾಧ್ಯಕ್ಷರು ಶುಕ್ರವಾರ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದರು.
ಆನೆಕೆರೆಗೆ ಬಾಗಿನ ಅರ್ಪಿಸಿ ನಂತರ ಮಾತನಾಡಿದ ಪುರಸಭೆ ಅಧ್ಯಕ್ಷ ಅನಂತವಿಕಾಸ ನಿಂಗೋಜಿ, ಕುಡಿಯುವ ನೀರಿನ ಜಲಮೂಲವಾದ ಆನೆಕೆರೆಯ ದಡದಲ್ಲಿ ಗಿಡಗಂಟಿಗಳು ಬೆಳೆದುನಿಂತಿದ್ದು, ನೀರಲ್ಲಿ ಜೊಂಡು ನಿರ್ವಣಗೊಳ್ಳುವ ಆತಂಕ ಎದುರಾಗಿದೆ. ಪುರಸಭೆ ವತಿಯಿಂದ ಕೂಡಲೆ ಸ್ವಚ್ಛತಾ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಪಟ್ಟಣದ 35 ಸಾವಿರ ನಾಗರಿಕರಿಗೆ ಕುಡಿಯುವ ನೀರಿನ ಜಲಾಗಾರವಾಗಿರುವ ಆನೆಕೆರೆ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಈ ಕಾರ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು, ಕೆರೆಯ ಅಚ್ಚುಕಟ್ಟು ಪ್ರದೇಶದ ತೋಟಗಾರರು ಕೈಜೋಡಿಸಬೇಕು. ಕೆರೆಯ ಮೇಲಿನ ರಸ್ತೆ ಅಭಿವೃದ್ಧಿಗೆ ಪುರಸಭೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ರಾತ್ರಿ ಸಮಯದಲ್ಲಿ ಕೆಲವರು ಮದ್ಯ ಕುಡಿದು ಬಾಟಲಿಗಳನ್ನು ಕೆರೆಗೆ ಎಸೆಯುತ್ತಿರುವುದು ಕಂಡುಬಂದಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನೇಮಕಗೊಳಿಸಿ, ಕಾನೂನು ಕ್ರಮ ಜರುಗಿಸಲಾಗುವುದು. ಕೆರೆಯ ನೀರನ್ನು ಕಾಯ್ದುಕೊಳ್ಳುವುದು, ಅಗತ್ಯವಿದ್ದಷ್ಟು ನಿಯಮಿತವಾಗಿ ಬಳಸುವುದು. ಅಶುದ್ಧವಾಗದಂತೆ ಕಾಪಾಡುವುದು ಎಲ್ಲ ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದರು. ಉಪಾಧ್ಯಕ್ಷೆ ಶಂಶಿಯಾಬಾನು ಬಾಳೂರ, ಸದಸ್ಯರಾದ ಖುರ್ಷಿದ್ ಹುಲ್ಲತ್ತಿ, ಮಹೇಶ ಪವಾಡಿ, ಗಂಗಾಬಾಯಿ ನಿಂಗೋಜಿ, ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಸಣ್ಣ ನೀರಾವರಿ ಇಲಾಖೆ ಕಿರಿಯ ಇಂಜಿನಿಯರ ಕೆ.ಆರ್. ರಾಘವೇಂದ್ರ, ತೋಟಗಾರರಾದ ಬಾಳಾರಾಮ ಗುರ್ಲಹೊಸೂರ, ಶರಶ್ಚಂದ್ರ ದೇಸಾಯಿ, ಕೃಷ್ಣಾ ಶಿಂಧೆ, ಮಹೇಶ ಅರಳೆಲಿಮಠ, ಕೆ.ಎಲ್. ದೇಶಪಾಂಡೆ ಇದ್ದರು.