ನಾರಾಯಣಪುರಕ್ಕೆ ಶನಿವಾರ ರಾಷ್ಟ್ರೀಯ ರೋಗವಾಹಕ ಆಶ್ರಿತರೋಗ ನಿಯಂತ್ರಣ ಕೇಂದ್ರದ ಉಪನಿರ್ದೇಶಕ ಡಾ.ಶರೀಫ್ ಮತ್ತು ತಜ್ಞ ವೈದ್ಯರು ಭೇಟಿ ನೀಡಿ ಆನೆಕಾಲು ರೋಗ ತಡೆಗೆ ಸಾಮೂಹಿಕ ಮಾತ್ರೆ ವಿತರಣೆ ಪರಿಶೀಲಿಸಿದರು. ಡಾ.ಭಾವನಾ, ಡಾ.ಪವನರಾವ್ ಇತರರಿದ್ದರು. 
ಜಿಲ್ಲೆ

ಆನೆಕಾಲು ರೋಗಮುಕ್ತ ಜಿಲ್ಲೆಗೆ ಶ್ರಮಿಸಿ

ಕೊಡೇಕಲ್: ಆನೆಕಾಲು ರೋಗಮುಕ್ತ ಜಿಲ್ಲೆ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಡಿಇಸಿ ಮಾತ್ರೆ ಸೇವಿಸಬೇಕು ಎಂದು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕೇಂದ್ರದ ಉಪನಿರ್ದೇಶಕ ಡಾ.ಶರೀಫ್ ಕೋರಿದರು.

ನಾರಾಯಣಪುರದಲ್ಲಿ ಶನಿವಾರ ಆನೆಕಾಲು ರೋಗ ನಿರ್ಮೂಲನೆಗೆ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮ ಪರಿಶೀಲಿಸಿದ ಅವರು, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಆನೆಕಾಲು ರೋಗ ಮತ್ತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಮಾತ್ರೆ ಸೇವನೆ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಗ್ರಾಮೀಣ ಜನರು ಮಾತ್ರೆ ಸೇವಿಸುವ ಬಗ್ಗೆ ತಪ್ಪು ಗ್ರಹಿಕೆ ಹೊಂದಿದ್ದರಿಂದ ರೋಗದಿಂದ ಮುಕ್ತಿ ಸಿಕ್ಕಿಲ್ಲ. ವೈದ್ಯರ ಸಲಹೆಯಂತೆ ಮಾತ್ರೆ ಸೇವಿಸಬೇಕು. ಮುಖ್ಯವಾಗಿ ಪ್ರತಿಯೊಬ್ಬರೂ ತಮ್ಮ ಮನೆ ಸುತ್ತ ನೀರು ನಿಲ್ಲದಂತೆ ಸ್ವಚ್ಛವಾಗಿರಿಸಬೇಕು ಎಂದು ಸಲಹೆ ನೀಡಿದರು.

ಕೀಟಶಾಸ್ತç ತಜ್ಞೆ ಆರ್.ಭಾವನಾ ಮಾತನಾಡಿ, ಸೊಳ್ಳೆಗಳಿಂದ ಬರುವ ಆನೆಕಾಲು ರೋಗ ಮನುಷ್ಯನ ದೇಹದ ಮುಖ್ಯ ಭಾಗಗಳಲ್ಲಿ ಬಾವು ಉಂಟಾಗಿ ತೊಂದರೆ ನೀಡುತ್ತದೆ. ಭಯ ಪಡದೆ ಡಿಇಸಿ ಮಾತ್ರೆ ಸೇವಿಸಿದರೆ ರೋಗ ತಡೆಗಟ್ಟಬಹುದು ಎಂದರು.

ಡಾ.ಪವನರಾವ್, ಬಸವರಾಜ ಕಾಂತಾ, ಎಚ್‌ಐಒ ಉಮೇಶ, ಶಿವರಾಜ, ಸಿಎಚ್‌ಒ ಬೀರಪ್ಪ, ಎಚ್‌ಐಒ ಆನಂದ ಮಠ, ಅಂಗನವಾಡಿ ಕಾರ್ಯಕರ್ತೆ ಸಂಪಂಗಿ ಭೋವಿ, ಆಶಾ ಕಾರ್ಯಕರ್ತೆ ಈರಮ್ಮ ಹಿರೇಮಠ ಇತರರಿದ್ದರು. ತಂಡದ ಅಧಿಕಾರಿಗಳು ಗ್ರಾಮದ ಮನೆ ಮನೆಗೆ ಭೇಟಿ ನೀಡಿ ತಿಳಿವಳಿಕೆ ಮೂಡಿಸಿ ಮಾತ್ರೆಗಳನ್ನು ನುಂಗಿಸಿದರು. ವ್ಯಾಪ್ತಿಗೆ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಜತೆ ಚರ್ಚಿಸಿ ಮಾಹಿತಿ ಪಡೆದರು.