ಔರಾದ್: ಆನೆಕಾಲು ರೋಗ ನಿರ್ಮೂಲನೆ ಕೆಲಸ ೨೦೦೪ರಿಂದ ಆರಂಭವಾಗಿದೆ. ೨೦೨೧ರಿಂದ ಸಾಮೂಹಿಕ ಔಷಧ ಸೇವನೆ ಹಾಗೂ ಜಾಗೃತಿ ಕಾರ್ಯಕ್ರಮ ಎಲ್ಲೆಡೆ ನಡೆದಿದ್ದು, ಸಾಮೂಹಿಕವಾಗಿ ಮಾತ್ರೆ ನುಂಗುವ ಮೂಲಕ ಸಹಕರಿಸಬೇಕು ಎಂದು ಡಿಎಚ್‌ಒ ಡಾ.ರತಿಕಾಂತ ಸ್ವಾಮಿ ಕೋರಿದರು.
ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಆನೆಕಾಲು ರೋಗ ನಿರ್ಮೂಲನೆಗೆ ಸಾಮೂಹಿಕ ಔಷಧ ಸೇವನೆ ಮೂರನೇ ಸುತ್ತಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಜಿ¯್ಲೆಯಲ್ಲಿ ೩೦೦೦ಕ್ಕಿಂತ ಹೆಚ್ಚು ಆನೆಕಾಲು ರೋಗಿಗಳಿದ್ದಾರೆ. ಅವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಮಾರ್ಗದರ್ಶನ, ಚಿಕಿತ್ಸೆ ಮತ್ತು ಗುಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಡಾ.ಸಂಜೀವಕುಮಾರ ಪಾಟೀಲ್ ಮಾತನಾಡಿ, ಕಲುಷಿತ ನೀರಿನಲ್ಲಿ ಬೆಳೆಯುವ ಕ್ಯೂಲೆಕ್ಸ್ ಜಾತಿಯ ಸೊಳ್ಳೆ ಕಚ್ಚುವುದರಿಂದ ಆನೆಕಾಲು ರೋಗ ಬರುತ್ತದೆ. ನಂತರ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕಾಲು ದಪ್ಪ, ವೃಷಣಗಳ ಊತ, ಕೈಗಳು ದಪ್ಪ, ಸ್ತನಗಳು ದಪ್ಪ ಆಗುವುದು, ಆಗಾಗ್ಗೆ ಜ್ವರ, ವಾಂತಿ, ತಲೆನೋವು ಇದರ ಲಕ್ಷಣಗಳು. ರೋಗ ಬಾಧಿತರಲ್ಲಿ ನರಳಿಕೆ ಹೆಚ್ಚಾಗಿರುತ್ತದೆ. ಬಯಲು ಶೌಚಕ್ಕೆ ಹೋಗುವುದರಿಂದಲೂ ಬರುತ್ತದೆ ಎಂದರು.
ಟಿಎಚ್‌ಒ ಡಾ.ಗಾಯತ್ರಿದೇವಿ ಮಾತನಾಡಿ, ವಾರಕ್ಕೊಮ್ಮೆ ನೀರಿನ ತೊಟ್ಟಿ ಸ್ವಚ್ಛಗೊಳಿಸಬೇಕು. ನೀರು ಸಂಗ್ರಹ ಆಗದಂತೆ ಎಚ್ಚರ ವಹಿಸಬೇಕು. ಸೊಳ್ಳೆಗಳ ಉತ್ಪತ್ತಿ ತಪ್ಪಿಸಲು ವಾರದಲ್ಲಿ ಕನಿಷ್ಠ ಒಂದು ದಿನ ನೀರು ಸಂಗ್ರಹಿಸುವ ಸಾಮಗ್ರಿ ಒಣಗಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿಯಿAದ ಚರಂಡಿ ಮತ್ತು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಗರ್ಭಿಣಿಯರು, ಎರಡು ವರ್ಷದೊಳಗಿನ ಮಕ್ಕಳನ್ನು ಹೊರತುಪಡಿಸಿ ಜನರಿಗೆ ಊಟದ ನಂತರ ಡಿಇಸಿ, ಐವರ್ ಮೆಕ್ಟಿನ್ ಮತ್ತು ಅಲ್ಬೆಂಡಜೋಲ್ ಮಾತ್ರೆ ಕೊಡುತ್ತಿದ್ದು, ಇದಕ್ಕಾಗಿ ಸಿಬ್ಬಂದಿ ನೇಮಿಸಲಾಗಿದೆ ಎಂದರು.
ಪ್ರಮುಖರಾದ ಸಮಾಧಾನ ಸ್ವಾಮಿ, ನಾಗಪ್ಪ ಮುಸ್ತಾಪುರೆ, ಮಹಾದೇವಿ, ಅನಿತಾ, ಜೀತುಲಾಲ್, ಎಂ.ಎ. ನಯೂಮ್, ಅಬ್ದುಲ್ ಅತೀಖ್, ದೇವಿದಾಸ, ರಾಧಾಬಾಯಿ, ತುಕಾರಾಮ ಇತರರಿದ್ದರು.