ಜಿಲ್ಲೆ

ಆನೆ-ಮಾನವ ಸಂಘರ್ಷ ಪರಿಹಾರ ಪಟ್ಟಿ ಮಾಡಿ ತಿಳಿಸಿ

ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಕಾಫಿ ಬೆಳೆಗಾರರು ಮತ್ತು ಕಾರ್ಮಿಕರು.

ಸುಂಟಿಕೊಪ್ಪ: ಮುಂದಿನ 20 ದಿನಗಳಲ್ಲಿ ಆನೆ-ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ತಕ್ಷಣದ ದೀರ್ಘಕಾಲಿನ ಪರಿಹಾರೋಪಾಯಗಳನ್ನು ಪಟ್ಟಿ ಮಾಡಿ ಸಲ್ಲಿಸುವಂತೆ ಅರಣ್ಯಾಧಿಕಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಸೂಚಿಸಿದರು.

ಕೆದಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮಂಗಳವಾರ ಸಂಜೆಯೇ ಕೊಡಗು ಮುಖ್ಯ ಅರಣ್ಯಾಧಿಕಾರಿ ಅವರು ಸಾರ್ವಜನಿಕರೊಂದಿಗೆ ಮಡಿಕೇರಿಯಲ್ಲಿ ಆನೆ-ಮಾನವ ಸಂಘರ್ಷ ಕುರಿತು ವಿಸ್ತೃತವಾದ ಚರ್ಚೆ ನಡೆಸಲಿದ್ದಾರೆ. ತಾತ್ಕಾಲಿಕ ಮತ್ತು ದೀರ್ಘಕಾಲದ ಪರಿಹಾರೋಪಾಯಗಳನ್ನು ಕ್ರೋಢೀಕರಿಸಿ ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರ ಗಮನಕ್ಕೆ ತರಲಿದ್ದಾರೆ ಎಂದು ಹೇಳಿದರು.

ಪೊನ್ನತ್‌ಮೊಟ್ಟೆಯಿಂದ ಹೊರೂರುವರೆಗಿನ 9 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಬೇಕಾಗಿದ್ದು ಅದು ಕಾರ್ಯಗತಗೊಳ್ಳುವವರೆಗೆ ಸೋಲಾರ್ ಬೇಲಿಯನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ 6 ಸಾಕಾನೆಗಳು ಕೆದಕಲ್ ವ್ಯಾಪ್ತಿಯ ಡಿ ಬ್ಲಾಕ್‌ನಲ್ಲಿ ಬೀಡು ಬಿಟ್ಟಿದ್ದು ಕಾಡಾನೆಯ ಚಲನವಲನ ಪತ್ತೆ ಹಚ್ಚುವ ಕಾರ್ಯಾಚರಣೆ ನಡೆದಿದೆ ಎಂದು ವಿವರಿಸಿದರು.

ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆಗಳು ಏನಾಗಿವೆ ಎಂಬುದರ ಕುರಿತು ಅಧಿಕಾರಿಗಳಿಗೆ ಮಾಹಿತಿ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಈ ಬಗ್ಗೆ ಅರಣ್ಯಾಧಿಕಾರಿಗಳು ಪರಿಸ್ಥಿತಿಯ ಗಂಭೀರತೆ ಅರಿತು ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಕಾಫಿ ಬೆಳೆಗಾರರು, ಕಾರ್ಮಿಕರು ಮತ್ತು ಸಾರ್ವಜನಿಕರು ಕಾಡಾನೆ ಹಾವಳಿ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಎಲ್ಲರೂ ಜೀವಭಯದಲ್ಲಿ ದಿನ ಕಳೆಯುವಂತಾಗಿದೆ. ಆನೆ ಉಂಟುಮಾಡಿರುವ ನಷ್ಟಗಳ ಬಗ್ಗೆ ಶಾಸಕರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟರು.

2020ರಿಂದ ಆನೆ ಹಾವಳಿಯಿಂದ ಕೃಷಿ ಫಸಲು ನಾಶದ ಬಗ್ಗೆ ಅರಣ್ಯ ಇಲಾಖೆಗೆ 24 ಬಾರಿ ಪತ್ರ ಬರೆದಿದ್ದರೂ ಯಾವುದೇ ಸ್ಪಂದನೆ ಇಲ್ಲದಿರುವ ಬಗ್ಗೆ ಬೆಳೆಗಾರರೊಬ್ಬರು ಅಳಲು ತೋಡಿಕೊಂಡರು. ಅವರ ಅರ್ಜಿಯ ಕುರಿತು ತಕ್ಷಣ ಸ್ಪಂದಿಸುವಂತೆ ಡಿಸಿಎಫ್ ಪೂವಯ್ಯ ಅವರಿಗೆ ಶಾಸಕರು ಸೂಚಿಸಿದರು.
ಅರಣ್ಯ ಇಲಾಖೆಯವರು ಬೆಳಗ್ಗೆ ಮತ್ತು ಶಾಲಾ ಮಕ್ಕಳು ಬರುವ ಸಂದರ್ಭ ಆನೆಗಳ ಚಲನವಲನದ ಬಗ್ಗೆ ನಿಗಾ ವಹಿಸಬೇಕು ಎಂದು ಡಿಸಿಎಫ್ ಅವರಿಗೆ ಸೂಚನೆ ನೀಡಿದ ಶಾಸಕರು ಬೆಳಗ್ಗೆ 6 ರಿಂದ ರಾತ್ರಿ 9ರವರೆಗೆ ಕ್ಷೀಪ್ರ ಕಾರ್ಯಪಡೆ ಸನ್ನದ್ಧವಾಗಿರಬೇಕು. ಆಂಬುಲೆನ್ಸ್ ಸಿದ್ಧವಾಗಿ ಇಟ್ಟುಕೊಳ್ಳುವಂತೆ ತಿಳಿಸಿದರು.

ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ್, ಪ್ರಭಾರ ಆರ್‌ಎಫ್‌ಒ ಚೇತನ್, ಡಿಆರ್‌ಎಫ್‌ಗಳಾದ ರಂಜನ್ ಮತ್ತು ದೇವಯ್ಯ ಸೇರಿದಂತೆ ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಕೆದಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ, ಉಪಾಧ್ಯಕ್ಷೆ ಪಾರ್ವತಿ ಸೋಮಯ್ಯ, ಗ್ರಾಪಂ ಮಾಜಿ ಉಪಾಧ್ಯಕ್ಷ ಸಂಜು ಪೊನ್ನಪ್ಪ, ಪಿಡಿಒ ರಾಜಶೇಖರ್, ಗ್ರಾಮ ಪಂಚಾಯಿತಿ ಸದಸ್ಯರು, ಕೆದಕಲ್, ಹೊರೂರು, ಹಾಲೇರಿ ವ್ಯಾಪ್ತಿಯ ವಿವಿಧ ಕಾಫಿ ತೋಟಗಳ ಮಾಲೀಕರು ಭಾಗವಹಿಸಿದ್ದರು.