ಜಿಲ್ಲೆ

ಆನೆ ಕಾಲು ರೋಗ ಪತ್ತೆಗೆ ರಕ್ತ ಲೇಪನ ಸಂಗ್ರಹಣೆ

ಬೈಲಕುಪ್ಪೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗ ವಾಹಕ ಆಶ್ರಿತಾ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಮೈಸೂರು, ಇವರ ಸಹಯೋಗದಲ್ಲಿ ಪಿರಿಯಾಪಟ್ಟ ತಾಲೂಕಿನ ಕೊಪ್ಪ ಪ್ರಥಮಿಕ ಆರೋಗ್ಯ ಕೇಂದ್ರ ವ್ಯಾಪಿಯ್ತ ದೊಡ್ಡ ಹೊಸೂರು ಗ್ರಾಮದಲ್ಲಿ ಆನೆಕಾಲು ರೋಗ ಪತ್ತೆಗಾಗಿ ಮೈಕ್ರೋ ಪ್ಯಾಲೇರಿಯಾ ರಕ್ತ ಲೇಪನ ಸಂಗ್ರಹಣೆಗೆ ಮಂಗಳವಾರ ತಾಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಆನೆ ಕಾಲು ರೋಗ ಪರಾವಲಂಬಿ ಸೂಕ್ಷ್ಮಾಣು ಜೀವಿಯಿಂದ ಉಂಟಾಗುವ ಕಾಯಿಲೆ. ಕ್ಯೂಲೆಕ್ಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ರಾತ್ರಿ ವೇಳೆ ಕಚ್ಚುತ್ತದೆ. ಈ ರೋಗ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಜನರು ಸುತ್ತಮುತ್ತಲಿನ ತಮ್ಮ ಜಾಗಗಳಲ್ಲಿ ಚರಂಡಿ ಅಥವಾ ಹಳ್ಳಕೊಳ್ಳಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ ಸೊಳ್ಳೆಗಳು ನೀರಿನಲ್ಲಿ ಸಂತಾನ ಅಭಿವೃದ್ಧಿ ಮಾಡುತ್ತವೆ. ಜತೆಗೆ ಸ್ವಚ್ಛತೆ, ನೈರ್ಮಲ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂದರು.

ಶಾನುಭೋಗನಹಳ್ಳಿ ವೈದ್ಯಾಧಿಕಾರಿ ಡಾ. ಸುನೀಲ್ ಮಾತನಾಡಿ, ಆನೆಕಾಲು ರೋಗವು ಸೋಂಕಿತ ಸೊಳ್ಳೆ ಕಚ್ಚಿದ ಒಂದು ವಾರದಲ್ಲಿ ಜ್ವರ, ಮೈಕೈ ನೋವು ಕಾಣಿಸುತ್ತದೆ. ನಂತರ ಯಾವುದೇ ಲಕ್ಷಣಗಳು ಇರುವುದಿಲ್ಲ. ಆದರೆ 8 ರಿಂದ 10 ವರ್ಷ ಕಳೆದ ಮೇಲೆ ಮನುಷ್ಯರ ಕಾಲು ಆನೆಕಾಲಿನಂತೆ ಆಗುತ್ತದೆ. ಕಾಲಿಗೆ ನೀರು ತುಂಬುತ್ತದೆ. ಚರ್ಮ ದಪ್ಪವಾಗುತ್ತದೆ. ಸೊಳ್ಳೆಯಿಂದ ಸೋಂಕು ಪಡೆದ ಆರಂಭಿಕ ಹಂತದಲ್ಲಿ ರಾತ್ರಿ ಸಮಯದಲ್ಲಿ ರಕ್ತ ಲೇಪನ ತೆಗೆದು, ಅದರಲ್ಲಿ ಪರಾವಲಂಬಿ ಜೀವಿ ಕಂಡು ಬಂದಲ್ಲಿ ಡಿಇಸಿ ಮಾತ್ರೆಗಳನ್ನು 12 ದಿನ ಸೇವಿಸಿದರೆ ಪೂರ್ಣ ಗುಣಮುಖರಾಗುತ್ತಾರೆ.

ಆರಂಭಿಕ ಹಂತದಲ್ಲಿ ಕಂಡು ಹಿಡಿಯದಿದ್ದರೆ ಎಂಟು ಹತ್ತು ವರ್ಷಗಳಲ್ಲಿ ಕಾಲು ಆನೆ ಕಾಲಿನ ರೀತಿ ಆಗುವುದು. ನಂತರ ಕೇವಲ ಕಾಲಿನ ಆರೈಕೆ ಮಾಡಬಹುದೇ ಹೊರತು ಗುಣಮುಖ ಸಾಧ್ಯತೆ ಕಡಿಮೆ ಎಂದು ತಿಳಿಸಿದರು.

ದೊಡ್ಡ ಹೊಸೂರು ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ 5 ತಂಡಗಳಾಗಿ ಸುಮಾರು 20 ವರ್ಷ ಮೇಲ್ಪಟ್ಟ 300ಕ್ಕೂ ಹೆಚ್ಚು ಜನರಿಂದ ರಕ್ತ ಲೇಪನ ಪಡೆದು ಸ್ಥಳದಲ್ಲೇ ಪರೀಕ್ಷಿಸಲಾಯಿತು.

ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೀಲಾ, ಉಪಾಧ್ಯಕ್ಷೆ ಅಕ್ಕಯಮ್ಮ, ಸದಸ್ಯರಾದ ಸಾಧಿಕ್, ರಿಯಾಜ್, ಕಬೀರ್, ಬೈಲಕುಪ್ಪೆ ವೈದ್ಯಾಧಿಕಾರಿಗಳಾದ ಡಾ.ಭರತ್, ಡಾ.ದೀಪಕ್, ಕೊಪ್ಪ ಗ್ರಾಮ ಪಂಚಾಯಿತಿ ಪಿಡಿಒ ಸತೀಶ್, ಸಿಬ್ಬಂದಿ ಶಾಂತಕುಮಾರಿ, ಮಂಜುಳಾ, ಪ್ರಯೋಗ ಶಾಲೆ ತಂತ್ರಜ್ಞ ನಾಗರಾಜ್ ಇತರರಿದ್ದರು.