ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಮುರಾರ್ಜಿ ವಸತಿ ಶಾಲೆಯಲ್ಲಿ ವಿಶ್ವ ಆನೆ ದಿನ ಆಚರಿಸಲಾಯಿತು. ಆರ್.ಕೆ.ಮಧು, ಮಂಜು, ನಂಜುಂಡಸ್ವಾಮಿ ಇದ್ದರು. 
ಜಿಲ್ಲೆ

ಆನೆ ಕಾರಿಡಾರ್ ಮಾಡುವುದು ಅಗತ್ಯ

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಆನೆ ದಿನವನ್ನು ಸೋಮವಾರ ಆಚರಣೆ ಮಾಡಲಾಯಿತು.

ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಮಾತನಾಡಿ, ಆನೆಗಳು ಕಾಡಿನ ಆರೋಗ್ಯ, ಸಮತೋಲನ ಕಾಪಾಡುವಲ್ಲಿ ಪ್ರಮುಖ ಮುಖ್ಯಪಾತ್ರ ವಹಿಸುತ್ತವೆ. ತಾರ, ನೆಲ್ಲಿ, ಮುಂತಾದ ಮರಗಳ ಬೀಜ ಪ್ರಸಾರದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಪ್ರಪಂಚದಲ್ಲಿ ಮುಖ್ಯವಾಗಿ 2 ಪ್ರಬೇಧದ ಆನೆಗಳಿದ್ದರೂ ಆಫ್ರಿಕಾದ ಆನೆಯಾದ ಬುಶ್ ಹಾಗೂ ಫಾರೆಸ್ಟ್ ಆನೆಗಳು ಬೇರೆ ಬೇರೆ ಪ್ರಬೇಧಗಳಾಗಿವೆ ಎಂದರು.

ಆನೆಗಳ ದಂತಕ್ಕಾಗಿ ಅವುಗಳನ್ನು ಕೊಲ್ಲುತ್ತಿರುವುದು ವಿಷಾದನೀಯ. ಕಾಡಂಚಿನಲ್ಲಿ ಮಾನವ -ಆನೆ ಸಂಘರ್ಷ ಹೆಚ್ಚಾಗುತ್ತಿರುವ ಪರಿಣಾಮ ಏಷಿಯಾದ ಆನೆಗಳೂ ವಿನಾಶದಂಚಿನಲ್ಲಿದೆ. ಆದ್ದರಿಂದ ಆನೆ ಕಾರಿಡಾರ್ ಮಾಡುವುದು ತುರ್ತುಅಗತ್ಯ ಎಂದು ಪ್ರತಿಪಾದಿಸಿದರು. ತಾವೇ ಸೆರೆ ಹಿಡಿದ ಆನೆಗಳ ಚಿತ್ರಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಂಜು, ನಂಜುಂಡಸ್ವಾಮಿ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.