ಜಿಲ್ಲೆ

ಆನೆ ಕಾರಿಡಾರ್ ನಿರ್ಮಾಣಕ್ಕೆ ಮಲೆನಾಡಿಗರಿಂದ ಮುಖ್ಯಮಂತ್ರಿಗೆ ಮನವಿಗೆ ಸಿದ್ದತೆ

ಹಾಸನ: ಮಲೆನಾಡು ಭಾಗದಲ್ಲಿ ಕಳೆದ ಮೂರ‌್ನಾಲ್ಕು ದಶಕಗಳಿಂದ ಮಗ್ಗಲು ಮುಳ್ಳಾಗಿ ಕಾಡುತ್ತಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬುದು ಮರೀಚಿಕೆಯಾಗಿದೆ. ಪ್ರತಿನಿತ್ಯ ಸಾವು-ನೋವು ಸಂಭವಿಸುತ್ತಿದ್ದರು ಕೂಡ ಸಂಬಂಧಪಟ್ಟವರು ನಿರ್ಲಕ್ಷೃವಹಿಸಿರುವುದರಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ
ಎಷ್ಟೇ ಸರ್ಕಾರಗಳು ಬಂದರೂ, ಹೋದರೂ ಅವರು ನೀಡಿದ ಭರವಸೆಗಳೆಲ್ಲಾ ಕಾಡಾನೆಯಿಂದ ಬಲಿಯಾದ ಅಮಾಯಕರು ಹಾಗೂ ಹತ್ತು ಹಲವು ಕಾರಣಗಳಿಗೆ ಜೀವತೆತ್ತ ಕಾಡಾನೆಗಳ ಜೊತೆಯಲ್ಲೇ ಸಮಾಧಿಯಾಗಿವೆ. ಪರಿಣಾಮ ಮಲೆನಾಡಿಗರು ಕಾಡಾನೆ ಕಾಟದಿಂದ ಹೈರಾಣಾಗಿ, ಇಲ್ಲಿ ಇರುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದಾರೆ.
ಇತ್ತೀಚೆಗಂತೂ ಕಾಡಾನೆಗಳು ಊರೊಳಕ್ಕೇ ನುಗ್ಗಿ ಜೀವ ತೆಗೆಯಲು ಹವಣಿಸುತ್ತಿರುವುದರಿಂದ ಬದುಕುವುದು ಹೇಗೆ ಎಂಬ ಭೀತಿ ಬಹುತೇಕ ಜನರಲ್ಲಿ ಆವರಿಸಿದೆ.ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಎಷ್ಟೊಂದು ಬಿಗಡಾಯಿಸಿದೆ ಎಂದರೆ 1991 ರಿಂದ ಇಲ್ಲಿಯವರೆಗೆ ಆನೆ ದಾಳಿಯಿಂದ ಬರೊಬ್ಬರಿ 74ಕ್ಕೂ ಹೆಚ್ಚು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ, 55 ಕ್ಕೂ ಹೆಚ್ಚು ಆನೆಗಳು ಜೀವ ಕಳೆದುಕೊಂಡಿವೆ. ನೂರಾರು ಜನರು ಅಂಗವೈಕಲ್ಯಕ್ಕೆ ತುತ್ತಾಗಿ ಮೂಲೆ ಹಿಡಿದಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ಇತ್ತೀಚೆಗೆ 15 ಲಕ್ಷ ರೂ. ಪರಿಹಾರ ನೀಡುತ್ತಿರುವುದನ್ನು ಬಿಟ್ಟರೆ, ನಷ್ಟ-ನೋವಿಗೆ ಪರಿಹಾರದ ವಿಚಾರ ಬಂದಾಗ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತಾಗಿದೆ.
ಈ ನಡುವೆ ಆನೆಗಳ ಸಂತತಿಯೂ ಈ ಭಾಗದಲ್ಲಿ ಗಣನೀಯವಾಗಿ ಹೆಚ್ಚಳ ಆಗುತ್ತಿರುವುದು (ಹತ್ತಿರ 100) ಸಮಸ್ಯೆ ಮತ್ತಷ್ಟು ಜಟಿಲವಾಗಲು ಮತ್ತೊಂದು ಕಾರಣವಾಗಿದೆ.1991 ರಿಂದ ಇಲ್ಲಿಯವರೆಗೆ ಬೆಳೆ ಹಾನಿಗೆಂದು 16 ಕೋಟಿಯಷ್ಟು ಪರಿಹಾರ ನೀಡಲಾಗಿದೆ. ಇದನ್ನು ಹೆಚ್ಚಳ ಮಾಡಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಆನೆ ಸಂತತಿಯ ಗೌರವ ಹೆಚ್ಚಿಸುವ ಯಾವುದೇ ಕೆಲಸ ಮಾಡಿದರೂ ನಮ್ಮ ಅಡ್ಡಿಯಿಲ್ಲ, ಆದರೆ ಅದೇ ಗಜಪಡೆಯಿಂದ ಆಗುತ್ತಿರುವ ಅನಾಹುತ, ಬೆಳೆನಷ್ಟ ತಪ್ಪಿಸಿ ಎಂದು ಮಲೆನಾಡಿಗರು ಪದೇ ಪದೆ ಮನವಿ ಮಾಡುತ್ತಿದ್ದರೂ ಯಾರೊಬ್ಬರೂ ಸ್ಪಂದಿಸದೇ ಇರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.
ಆದರೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅದರಲ್ಲೂ ಆಲೂರು, ಸಕಲೇಶಪುರ, ಬೇಲೂರು, ಅರಕಲಗೂಡು ಮೊದಲಾದ ತಾಲೂಕುಗಳಲ್ಲಿ ಕಾಡಾನೆ ಸಮಸ್ಯೆ ಮಿತಿ ಮೀರಿದ್ದರೂ, ಸರ್ಕಾರ ಅಲಕ್ಷ್ಯ ಮಾಡಿರುವುದೇಕೆ ಎಂದು ನೊಂದ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಆನೆಗಳ ಅಸಹಜ ಸಾವು, ಅವುಗಳ ರಕ್ಷಣೆ ಕುರಿತಂತೆ ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಹಾರೋಪಾಯ ಕಂಡು ಕೊಳ್ಳುವ ಸಂಬಂಧ 2011 ರಲ್ಲಿ ನಡೆದ ಸಭೆಯಲ್ಲಿ ಬೇಲೂರು-ಸಕಲೇಶಪುರ ತಾಲೂಕಿನಲ್ಲಿ 7 ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ 30 ಗ್ರಾಮಗಳ ವ್ಯಾಪ್ತಿಯ ಒಟ್ಟು 23,254,24 ಎಕರೆ ಅರಣ್ಯ ಲಕ್ಷಣ ಹೊಂದಿರುವ ಸರ್ಕಾರಿ ಪ್ರದೇಶಕ್ಕೆ 2,500 ಎಕರೆ ರೈತರ ಹಿಡುವಳಿ ಪ್ರದೇಶ ಒಳಗೊಂಡಂತೆ ಆನೆ ಕಾರಿಡಾರ್ ಎಂದು ಘೋಷಿಸುವ ಬಗ್ಗೆ ಅರಣ್ಯ ಇಲಾಖೆಗೆ ವರ್ಗಾಯಿಸಲು ತೀರ್ಮಾನಿಸಲಾಗಿತ್ತು.
ಆದರೆ ಸರ್ಕಾರದ ಮಟ್ಟದಲ್ಲಿ ಖಾಸಗಿ ಜಮೀನು ಸ್ವಾಧೀಪ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಒಪ್ಪಿಗೆ ದೊರೆಯದ ಕಾರಣ 2014 ರಲ್ಲಿ ಆನೆ ಕಾರಿಡಾರ್ ಯೋಜನೆ ಕೈ ಬಿಡುವ ನಿರ್ಧಾರಕ್ಕೆ ಬರಲಾಗಿದೆ. ಆದರೆ ರೈತರೇ ಜಮೀನು ಬಿಟ್ಟುಕೊಡಲು ಮುಂದೆ ಬಂದಿರುವುದರಿಂದ ಇನ್ನಾದರೂ ಆನೆ ಕಾರಿಡಾರ್ ಯೋಜನೆ ಜಾರಿಗೆ ಮುಂದಾಗಬೇಕು ಎಂದ ಬೇಡಿಕೆಗೆ ಮತ್ತೆ ಬಲ ಬಂದಿದೆ.

ಸ್ವ ಇಚ್ಛೆಯಿಂದ ಜಮೀನು ನೀಡಿಕೆ:ಈ ನಡುವೆ ರಕ್ಷಿತ ಅರಣ್ಯ ವಿಸ್ತರಣೆ ಮಾಡಿ, ಕಾಡಾನೆ ಸಮಸ್ಯೆಯನ್ನು ಕೊನೆಗಾಣಿಸಿ ಎಂದು ಆನೆ ಕಾಟದಿಂದ ನೊಂದು ಹೋಗಿರುವ ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ಅರಣಿ, ಬಟ್ಟೆಕುಮರಿ, ಬಾಜೆಮನೆ, ಬಾಳೆಹಳ್ಳ, ಮಂಕನಹಳ್ಳಿ, ಬೋರನಮನೆ, ಯತ್ತಹಳ್ಳ, ಯಡಕುಮರಿ ಗ್ರಾಮಗಳ ಜನರು ಸ್ವಯಂ ಪ್ರೇರಿತವಾಗಿ ಜಮೀನು ಬಿಟ್ಟು ಕೊಡುತ್ತೇವೆ ಎಂದು ಕಳೆದ ಒಂದು ದಶಕದಿಂದಲೂ ಹೇಳುತ್ತಿದ್ದಾರೆ.ಈ ಸಂಬಂಧ 2012ರಿಂದಲೇ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ಪತ್ರ ಬರೆಯುತ್ತ ಬಂದಿದ್ದಾರೆ. 2013 ರಲ್ಲೇ ಆಗಿನ ಡಿಸಿ ಅವರು ಗ್ರಾಮಸ್ಥರ ಸಭೆ ನಡೆಸಿ ಜಮೀನು ಬಿಟ್ಟುಕೊಡುವ ನಿರ್ಣಯವನ್ನು ಸರ್ಕಾರಕ್ಕೂ ಕಳಿಸಿದ್ದಾರೆ.
ಈ ಭಾಗದಲ್ಲಿ ಸುಮಾರು 22 ಸಾವಿರ ಎಕರೆ ಸರ್ಕಾರಿ ಗೋಮಾಳ ಮತ್ತು ಸಿ.ಎನ್.ಡಿ ಭೂ ಪ್ರದೇಶ ಇದೆ. ಆನೆ ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ಹೆಚ್ಚುವರಿಯಾಗಿ ಸುಮಾರು 3 ಸಾವಿರ ಎಕರೆ ಖಾಸಗಿ ಜಮೀನಿನ ಅವಶ್ಯಕತೆ ಇದೆ. ಒಂದೇ ಹಂತದಲ್ಲಿ ಯೋಜನೆ ಅನುಷ್ಠಾನ ಕಷ್ಟವಾದಲ್ಲಿ ಎರಡು ಹಂತಗಳಲ್ಲಿ ಜಮೀನು ಸ್ವಾಧೀನ ಪಡೆಯಬಹುದು ಎಂದು ರೈತರು ಒಪ್ಪಿಗೆ ಪತ್ರಕ್ಕೆ ಸಹಿಯನ್ನೂ ಹಾಕಿದ್ದಾರೆ.

ಸರ್ಕಾರ ಕೈಗೊಳ್ಳಬೇಕಾದ ಕ್ರಮ:
ಈಗಲೂ ಯಸಳೂರು ವಲಯ ವ್ಯಾಪ್ತಿಯ 8 ಗ್ರಾಮಗಳ ರೈತರು ಬಿಟ್ಟುಕೊಡಲು ತಯಾರಿರುವ ರಕ್ಷಿತ ಅರಣ್ಯದಂಚಿನ ಸುಮಾರು 3,300 ಎಕರೆ ಹಿಡುವಳಿ ಖಾಸಗಿ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು ಅರಣ್ಯ ಸೇರ್ಪಡೆ ಮಾಡಬೇಕು. ಇದರೊಂದಿಗೆ ಸುತ್ತಮುತ್ತಲಿನ 15 ಸಾವಿರ ಎಕರೆ ಡೀಮ್ಡ್ ಫಾರೆಸ್ಟ್ ಜಾಗವೂ ಸೇರಿಕೊಂಡು ಸುಮಾರು 20 ಸಾವಿರ ಎಕರೆ ಅರಣ್ಯವನ್ನು ಪಶ್ಚಿಮ ಘಟ್ಟದಲ್ಲಿ ಮರು ನಿರ್ಮಾಣ ಮಾಡಿದಂತಾಗುತ್ತದೆ. ಇದರಿಂದ ವನ್ಯ ಜೀವಿಗಳಿಗೆ ವಾಸಸ್ಥಳ, ವಲಸೆ ಮಾರ್ಗ ಮತ್ತು ಆಹಾರ ಲಭ್ಯತೆ ಪ್ರಮಾಣ ಹೆಚ್ಚಾಗುತ್ತದೆ.

ಮುಖ್ಯಮಂತ್ರಿಗಳಲ್ಲಿ ಮನವಿ:
ಕಳೆದ ಮೂರ್ನಾಲ್ಕು ದಶಕಗಳಿಂದ ಕಾಡಾನೆ ಸಮಸ್ಯೆ ಮುಂದುವರೆದಿದ್ದರೂ ಇದುವರೆಗೂ ಆಡಳಿತ ನಡೆಸಿದ ಯಾವುದೇ ಸರಕಾರಗಳು, ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿವೆ.ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾದರೂ ಇತ್ತ ಗಮನ ಹರಿಸಿ ಆನೆಧಾಮ ನಿರ್ಮಿಸಲು ಯೋಜನೆ ರೂಪಿಸಿ ಹಂತ ಹಂತವಾಗಿ ಕಾರ್ಯಗತಗೊಳಿಸಿ ಹಲವು ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲಿ ಎಂಬುದು ಹತ್ತಾರು ವರ್ಷಗಳಿಂದ ನೊಂದು ಹೋಗಿರುವ ಈ ಭಾಗದ ಸಂತ್ರಸ್ತ ರೈತರ ಮನವಿ ಸಲ್ಲಿಸಲು ಬೆಂಗಳೂರಿಗೆ ತೆರಳಿ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸಿಎಂ ಮತ್ತು ಅರಣ್ಯ ಸಚಿವರನ್ನು ಭೇಟಿಮಾಡಿ ಮನವಿ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.

ಆನೆಕಾರಿಡಾರ್ ಅಥವಾ ಆನೆಧಾಮ ನಿರ್ಮಾಣ ಮಾಡುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.ರೈತರು ಭೂಮಿ ಕೊಡಲು ಒಪ್ಪಿದರೆ ಅದನ್ನು ಖರೀದಿಸಿ ಆನೆಧಾಮ ನಿಮಾರ್ಣ ಮಾಡುವ ಚಿಂತನೆ ನಡೆಸಲಾಗಿದೆ.
-ಅರಣ್ಯ ಸಚಿವ ಈಶ್ವರ್ ಖಂಡ್ರೆ

ಆನೆಕಾರಿಡಾರ್ ಬೇಡಿಕೆ ಜೊತೆಗೆ, ಶ್ರೀಲಂಕಾ ಮಾದರಿ ಆನೆಧಾಮ ನಿರ್ಮಾಣಕ್ಕೆ ನಾವು ಸ್ವಂತ ಜಮೀನನ್ನು ಸರಕಾರಕ್ಕೆ ಬಿಟ್ಟು ಕೊಡುವುದಾಗಿ ಮುಂದೆ ಬಂದರೂ ಇದುವರೆಗೂ ಯಾವುದೇ ಸರಕಾರ ಸ್ಪಂದಿಸಿಲ್ಲ. ಶ್ರೀಲಂಕಾ ಮಾದರಿ ಆನೆಧಾಮ ನಿರ್ಮಾಣದಿಂದ ಮಲೆನಾಡು ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ವು ಒತ್ತು ನೀಡಿದಂತಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಅರಣ್ಯಸಚಿವರು ಇತ್ತ ಗಮನ ಹರಿಸಬೇಕು.
-ಎ.ಆರ್.ಜಗದೀಶ್, ಅತ್ತಿಹಳ್ಳಿ ಗ್ರಾಮಸ್ಥ