ಆನವಟ್ಟಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿದ್ದ ಬೀದಿಬದಿ ವ್ಯಾಪಾರಸ್ಥರ ಅಂಗಡಿಗಳನ್ನು ಬುಧವಾರ ತೆರವುಗೊಳಿಸಲಾಯಿತು.
ಈ ಹಿಂದೆ ಪಟ್ಟಣ ಪಂಚಾಯತಿಯವರು ತೆರವುಗೊಳಿಸಲು ಹೋದಾಗ ಅಂಗಡಿಯ ಮುಂಭಾಗ ಕುಟುಂಬಸ್ಥರೆಲ್ಲರು ಧರಣಿ ಕುಳಿತು, ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದರು. ಅಂತಹ ಅಂಗಡಿಗಳನ್ನು ಪೋಲಿಸರ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಲಾಯಿತು. ಪಪಂ ಅಧಿಕಾರಿಗಳಾದ ಪ್ರಭು, ಕೆ.ಪರಶುರಾಮ, ಜಾಕೀರ್, ಪಿಎಸ್‌ಐ ರಾಜು ರೆಡ್ಡಿ, ಅಗಾಸಿ, ಸಿಬ್ಬಂದಿ ಸಿದ್ದೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬೀದಿಬದಿ ವ್ಯಾಪಾರಸ್ಥರನ್ನು ಪಟ್ಟಣ ಪಂಚಾಯತಿಯವರು ತೆರವುಗೊಳಿಸಿದ್ದರಿಂದ ಮಳೆಗಾಲದಲ್ಲಿ ಬೇರೆ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗದೆ ನಾವೆಲ್ಲರು ಬೀದಿಗೆ ಬಂದಿದ್ದೇವೆ. ಸರ್ಕಾರ ಬೀದಿಬದಿ ವ್ಯಾಪಾರಸ್ಥರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ನಮಗೆ ಸೂಕ್ತ ಜಾಗದ ವ್ಯವಸ್ಥೆ ಮಾಡಿಕೊಡದೆ ಸುರಿಯುವ ಮಳೆಯಲ್ಲೇ ಇರುವ ಜಾಗದಿಂದ ಓಡಿಸಿ ದುಡಿಯುವ ಕೈಗಳಿಗೆ, ಹೊಟ್ಟೆಗಳ ಮೇಲೆ ಬರೆ ಎಳೆದಿದ್ದಾರೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡರು.
ಪಂಚಾಯತ್ ಅಧಿಕಾರಿಗಳು ಪಟ್ಟಣದ ಮುಖ್ಯರಸ್ತೆ ಪಕ್ಕದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ಆಟೋ, ಗೂಡ್ಸ್ ಆಟೋ ಹಾಗೂ ಓಮ್ನಿ ಸ್ಟಾಂಡ್ ನಿರ್ಮಿಸಿಕೊಟ್ಟಿದ್ದಾರೆ. ಇದು ಯಾವ ನ್ಯಾಯ ಎಂದು ಬೀದಿಬದಿ ವ್ಯಾಪಾರಸ್ಥರು ಪ್ರಶ್ನಿಸಿದರು.