ಶಿವಮೊಗ್ಗ: ಸೊರಬ ತಾಲೂಕಿನ ಆನವಟ್ಟಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಆನವಟ್ಟಿಯಲ್ಲಿ 390 ಕೋಟಿ ರೂ. ಮೊತ್ತದ ಮೂಡಿ ಹಾಗೂ ಮೂಗೂರು ಏತ ನೀರಾವರಿ ಯೋಜನೆಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಆನವಟ್ಟಿ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೆ ಏರಿಸುವಂತೆ ಶಾಸಕ ಕುಮಾರ್ ಬಂಗಾರಪ್ಪ ಮನವಿ ಮಾಡಿದ್ದಾರೆ. ಈ ಬೇಡಿಕೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸೊರಬ, ಸಾಗರ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿ ನನ್ನ ಗುರಿ. ಮೂಡಿ ಹಾಗೂ ಮೂಗೂರು ಏತ ನೀರಾವರಿ ಯೋಜನೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕು. ಯೋಜನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಒಳ ಒಪ್ಪಂದ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದರು.
ಇಂದು ಶಂಕುಸ್ಥಾಪನೆ ನೆರವೇರಿಸುತ್ತಿದ್ದರೂ ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಏಕಕಾಲದಲ್ಲಿ ಪೈಪ್ಲೈನ್, ಜಾಕ್ ವೆಲ್ ಹಾಗೂ ವಿದ್ಯುತ್ ಸಂಬಂಧಿತ ಕೆಲಸಗಳನ್ನು ಕೈಗೊಳ್ಳಲಾಗಿದೆ. ಕಾಮಗಾರಿ ಮುಗಿಸಲು ಎರಡು ವರ್ಷಗಳ ಸಮಯ ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಒಂದು ವರ್ಷದಲ್ಲಿ ಕೆಲಸ ಮುಗಿಸುವಂತೆ ತಿಳಿಸಿದ್ದೇನೆ ಎಂದರು.
ನಂಬಿಕೆ ಉಳಿಸಿಕೊಂಡಿದ್ದೇನೆ: ಕುಮಾರ್ ಬಂಗಾರಪ್ಪ ನನ್ನ ಮೇಲೆ ಇರಿಸಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ. ಅವರ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಿದ್ದೇನೆ. ವೇದಿಕೆ ಮುಂಭಾಗದಲ್ಲಿ ಕುಳಿತಿರುವ ಕುಮಾರ್ ಪತ್ನಿ, ಪುತ್ರ ಹಾಗೂ ಪುತ್ರಿ ಕುಮಾರ್ ಅವರನ್ನು ಅಭಿಮಾನದಿಂದ ಕಾಣುವಂತೆ ಈ ಕ್ಷೇತ್ರಕ್ಕೆ ಅನುದಾನ ನೀಡಿದ್ದೇನೆ ಎಂದು ಬಿಎಸ್ವೈ ಹೇಳಿದಾಗ ಕುಮಾರ್ ಪತ್ನಿ ವಿದ್ಯುಲ್ಲತಾ, ಪುತ್ರ ಅರ್ಜುನ್ ಹಾಗೂ ಪುತ್ರಿ ಲಾವಣ್ಯ ಎದ್ದು ನಿಂತು ಬಿಎಸ್ವೈಗೆ ನಮಸ್ಕರಿಸಿದರು.
ಸದ್ಯಕ್ಕೆ ಅನುದಾನ ಕೇಳಬೇಡಿ: ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಕೇವಲ ಏಳು ತಿಂಗಳಾಗಿದೆ. ಕೇವಲ ಸೊರಬ ತಾಲೂಕಿಗೆ 500 ಕೋಟಿ ರೂ. ಗೂ ಹೆಚ್ಚಿನ ಅನುದಾನ ನೀಡಿದ್ದೇನೆ. ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಿಗೂ ಇದೇ ರೀತಿ ಹಣ ಒದಗಿಸಿದ್ದೇನೆ. ಹೀಗಾಗಿ ಈ ವರ್ಷ ನಿಮ್ಮ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಅನುದಾನ ಕೇಳಬೇಡಿ. ನಾನು ಬೇರೆ ಕ್ಷೇತ್ರಗಳತ್ತಲೂ ಗಮನಹರಿಸಬೇಕಿದೆ. ಮೂರು ವರ್ಷಗಳ ಬಳಿಕ ನಾನು ಸಿಎಂ ಸ್ಥಾನದಿಂದ ಕೆಳಗಿಳಿಯುವ ವೇಳೆಗೆ ರಾಜ್ಯದ ಬಹುತೇಕ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ಬಿಎಸ್ವೈ ಜೋಳಿಗೆ ಊರಿಗೆಲ್ಲ ಹೋಳಿಗೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುದಾನ ಹಂಚಿಕೆ ಕುರಿತು ಮೇಲಿನಂತೆ ವ್ಯಾಖ್ಯಾನಿಸಿದ್ದು ಡಿಸಿಎಂ ಗೋವಿಂದ ಕಾರಜೋಳ. ಇಂದು ಕೇವಲ ಸೊರಬ ವಿಧಾನಸಭಾ ಕ್ಷೇತ್ರ ಒಂದರಲ್ಲೇ 500 ಕೋಟಿ ರೂ. ಗೂ ಹೆಚ್ಚಿನ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಾಗುತ್ತಿದೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಇದೇ ಪರಿಸ್ಥಿತಿ ಇದೆ. ಸಿಎಂ ತಮ್ಮ ಜೋಳಿಗೆಯಿಂದ ಎಲ್ಲರಿಗೂ ಹೋಳಿಗೆ ಹಂಚುತ್ತಿದ್ದಾರೆ. ಮಲೆನಾಡಿನ ಪಕ್ಕದಲ್ಲೇ ಇದ್ದರೂ ಸೊರಬ ತಾಲೂಕಿನಲ್ಲಿ ಪ್ರಾಣಿ ಪಕ್ಷಿಗಳಿಗೂ ಕುಡಿಯಲು ನೀರಿಲ್ಲದ ಸ್ಥಿತಿ ಇದೆ. ಈಗ ಮೂಡಿ ಹಾಗೂ ಮೂಗೂರು ಏತ ನೀರಾವರಿ ಯೋಜನೆಯಿಂದ ಅಂತರ್ಜಲ ಹೆಚ್ಚುತ್ತದೆ. ಕುಡಿಯುವ ನೀರು ಲಭಿಸುತ್ತದೆ. ಕೃಷಿಗೆ ನೀರಾವರಿ ವ್ಯವಸ್ಥೆ ಯಾಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 105 ವಸತಿ ನಿಲಯ ಹಾಗೂ ಹಾಸ್ಟೆಲ್ಗಳನ್ನು ನಡೆಸಲಾಗುತ್ತಿದೆ. ಇದರಿಂದ 11,000 ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ ನಮ್ಮ ಇಲಾಖೆಯಿಂದ 824 ವಸತಿ ಶಾಲೆ 2,309 ಹಾಸ್ಟೆಲ್ಗಳನ್ನು ನಡೆಸಲಾಗುತ್ತಿದೆ. 43 ಲಕ್ಷ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಬಿಎಸ್ವೈ ಭರವಸೆ ಈಡೇರಿಸಿದ್ದಾರೆ: ಚುನಾವಣಾ ಸಮಯದಲ್ಲಿ ಯಡಿಯೂರಪ್ಪ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲೂಕಾಗಿ ಗುರುತಿಸಿಕೊಂಡಿರುವ ಸೊರಬವನ್ನು ಸರ್ವಾಂಗೀಣ ಅಭಿವೃದ್ಧಿಪಡಿಸಲು ಸಿಎಂ ಮುಂದಾಗಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ತಾಲೂಕು ಕೇಂದ್ರವಾದ ಸೊರಬದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಆನವಟ್ಟಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂಬುದು ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿ ಸಿಎಂ ಇದನ್ನು ಪರಿಗಣಿಸಬೇಕು. ಈಗ ಶಂಕುಸ್ಥಾಪನೆ ನೆರವೇರಿಸಿರುವ ಕಾಮಗಾರಿಯಿಂದ ನೂರಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲು ಅನುಕೂಲವಾಗುತ್ತದೆ. 50ಕ್ಕೂ ಹೆಚ್ಚು ಗ್ರಾಮಗಳಿಗೆ ಇದರಿಂದ ಪ್ರಯೋಜನವಾಗಲಿದೆ ಎಂದರು.
ಕಣ್ಣೀರು ಒರೆಸುವ ಸಿಎಂ: ರೈತರೊಂದಿಗೆ ಅಳುವ ಸಿಎಂ ನಮಗೆ ಬೇಡ. ರೈತರ ಕಣ್ಣೀರು ಒರೆಸುವ ಮುಖ್ಯಮಂತ್ರಿ ನಮಗೆ ಬೇಕು. ಅಂತಹ ಸಿಎಂ ಆಗಿ ನಮಗೆ ಯಡಿಯೂರಪ್ಪ ಸಿಕ್ಕಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗಬಾರದು. ಸಿಎಂ ಹಾಗೂ ನಾವು ರೈತರೊಂದಿಗೆ ಇದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದರು. ಸೊರಬ ಕ್ಷೇತ್ರದಲ್ಲಿ ಬಂಗಾರಪ್ಪನವರ ಅವಧಿಯಲ್ಲಿ ಆಗದೇ ಇರುವ ಕಾಮಗಾರಿಗಳು ಕುಮಾರ್ ಬಂಗಾರಪ್ಪ ಅವಧಿಯಲ್ಲಿ ಆಗುತ್ತಿವೆ. ಯಡಿಯೂರಪ್ಪ ಕೊಡುಗೈ ದಾನಿ ಹಾಗೂ ಕುಮಾರ್ ಬಂಗಾರಪ್ಪ ಕ್ರಿಯಾಶೀಲ ಶಾಸಕ. ಇವರಿಬ್ಬರೂ ಸೇರಿಕೊಂಡು ಸೊರಬವನ್ನು ಮಾದರಿ ಕ್ಷೇತ್ರವಾಗಿ ರೂಪಿಸಲಿದ್ದಾರೆ ಎಂದು ಹೇಳಿದರು.
ಹೋರಾಟಕ್ಕೆ ಫಲ ಸಿಕ್ಕಿದೆ: ಮೂಡಿ ಹಾಗೂ ಮೂಗೂರು ಏತನೀರಾವರಿ ಯೋಜನೆ ಕ್ಷೇತ್ರದ ಜನರ ದೀರ್ಘಕಾಲದ ಕನಸು. ಶಾಶ್ವತ ನೀರಾವರಿಗಾಗಿ ಮೂರು ದಶಕಗಳಿಂದ ಇಲ್ಲಿ ಹೋರಾಟ ನಡೆಯುತ್ತಿದೆ. ಇಂದು ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ಇನ್ನು ಮುಂದೆ ಸೊರಬ ಬರಪೀಡಿತ ತಾಲೂಕು ಎಂದು ಘೊಷಣೆ ಆಗಬಾರದು. ದಂಡಾವತಿ ಯೋಜನೆಯಿಂದ ಮುಳುಗಡೆಯಾಗುವ ಪ್ರದೇಶದ ನೀರನ್ನು ಕೂಡ ಆನವಟ್ಟಿ ಭಾಗದಲ್ಲಿ ಬಳಸಿಕೊಳ್ಳುವಂತೆ ಆಗಬೇಕು. ಧಾರ್ವಿುಕವಾಗಿ ಮಹತ್ವ ಪಡೆದಿರುವ ಚಂದ್ರಗುತ್ತಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು. ಆನವಟ್ಟಿ ಹುಬ್ಬಳ್ಳಿ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು. ಆನವಟ್ಟಿ-ತಡಸ-ಹುಬ್ಬಳ್ಳಿ ಮಾರ್ಗದಲ್ಲಿ ರೈಲು ಸೇವೆ ಆರಂಭವಾಗಬೇಕು. ಚಂದ್ರಗುತ್ತಿಯಲ್ಲಿ ಪದವಿ ಕಾಲೇಜು ಆರಂಭಿಸಬೇಕು ಎಂದು ಬೇಡಿಕೆಗಳ ಪಟ್ಟಿಯನ್ನು ಶಾಸಕರು ಮುಂದಿಟ್ಟರು.
ವಿವಿಧ ಸವಲತ್ತುಗಳ ವಿತರಣೆ: ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. 12 ಮಂದಿ ರೈತರಿಗೆ ಪವರ್ ಟಿಲ್ಲರ್, 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಮೀನು ಕೃಷಿಕರಿಗೆ ಸಲಕರಣೆಗಳ ಕಿಟ್, ಅಲ್ಪಸಂಖ್ಯಾತರಿಗೆ ವೃತ್ತಿ ಪೋ›ತ್ಸಾಹ ಧನ, ಸ್ವಯಂ ವೃತ್ತಿ ಕೈಗೊಳ್ಳುವವರಿಗೆ ಸಿಎಂ ಸಾಂಕೇತಿಕವಾಗಿ ಸಹಾಯಧನ ವಿತರಿಸಿದರು.
ಡಿಸಿಎಂ ಗೋವಿಂದ ಕಾರಜೋಳ, ಕೃಷಿ ಸಚಿವ ಬಿ.ಸಿ.ಪಾಟೀಲ್, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಅನುರಾಧಾ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬಿ.ಗುಂಗೆ, ತಾಪಂ ಸದಸ್ಯರು, ಗ್ರಾಪಂ ಪ್ರತಿನಿಧಿಗಳು ಇದ್ದರು.