ಜಿಲ್ಲೆ

ಆಧ್ಯಾತ್ಮಿಕ ವಿಚಾರಗಳು ಬದುಕಿಗೆ ಪ್ರೇರಣೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ದೇವಸ್ಥಾನ, ಮಠ-ಮಂದಿರಗಳಲ್ಲಿ ನಡೆಯುವ ಪ್ರವಚನ ಹಾಗೂ ಆಧ್ಯಾತ್ಮಕ ವಿಚಾರಧಾರೆಗಳನ್ನು ಕೇಳುವುದಷ್ಟೇ ಅಲ್ಲ. ನಿಜ ಜೀವನದಲ್ಲಿ ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಬದುಕಲು ಅದನ್ನು ಪ್ರೇರಣೆಯನ್ನಾಗಿ ಮಾಡಿಕೊಳ್ಳಬೇಕು. ಅಂದಾಗ ಧಾರ್ವಿುಕ ಕಾರ್ಯಕ್ರಮಗಳಿಗೆ ನಿಜವಾದ ಅರ್ಥ ಬರಲು ಸಾಧ್ಯ ಎಂದು ಶಿರಹಟ್ಟಿ ಸಂಸ್ಥಾನಮಠದ ಶ್ರೀ ಫಕ್ಕೀರ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿಯ ನಾಗಶೆಟ್ಟಿಕೊಪ್ಪದ ಶ್ರೀ ಮಾರುತಿ ದೇವಸ್ಥಾನದಲ್ಲಿ ಹನುಮ ಜಯಂತಿ ಹಾಗೂ ದೇವಸ್ಥಾನದ ಜಾತ್ರಾಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಹನು-ಮನ ಧ್ಯಾನ ಎಂಬ ವಿಷಯ ಕುರಿತ ಪ್ರವಚನದ ಮಂಗಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಶಿರಕೋಳದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಜೀವನದ ಅಮೂಲ್ಯವಾದ ಕ್ಷಣಗಳನ್ನು ದುಡಿಮೆ ಬಿಟ್ಟರೆ ಆಧ್ಯಾತ್ಮಿಕಕ್ಕಾಗಿ ಮೀಸಲಿಡಬೇಕು. ಧರ್ಮ, ದೇವರು, ಗುರು, ತಾಯಿ ಇವರಿಗೆ ನಮ್ಮ ದೇಶದಲ್ಲಿ ಬಹಳ ಗೌರವವಿದೆ. ಪ್ರತಿಯೊಬ್ಬ ಭಾರತೀಯನಲ್ಲಿ ಹಾಸುಹೊಕ್ಕಿರುವ ಪರಂಪರೆಯಿದು. ಜನ್ಮ ಕೊಟ್ಟ ತಾಯಿ ಹಾಗೂ ಭೂಮಿ ಶ್ರೇಷ್ಠವಾದದ್ದು. ಕಷ್ಟ ಹಾಗೂ ಶನಿ ದೂರ ಆಗಬೇಕು ಎಂದರೆ ಪ್ರತಿಯೊಬ್ಬರೂ ಶ್ರೀ ಹನುಮಂತ ದೇವರಿಗೆ ಹೋಗು ಎಂದು ಹೇಳುತ್ತಾರೆ. ಹೀಗಾಗಿ ಹನುಮಂತ ದೇವರ ದೇವಸ್ಥಾನವಿಲ್ಲದ ಊರು, ಬಡಾವಣೆ ಇಲ್ಲ ಎಂಬ ಮಾತಿದೆ ಎಂದರು.

ದೇವರನ್ನು ಹುಡುಕಿಕೊಂಡು ಎಲ್ಲೆಲ್ಲೋ ಹೋಗುತ್ತೇವೆ. ಆದರೆ ದೇವರು ಇರುವುದು ಪ್ರೀತಿ, ಸ್ನೇಹದೊಳಗೆ ಮತ್ತು ತಾಯಿ-ತಂದೆ, ಶಿಕ್ಷಣ ನೀಡುವ ಗುರುಗಳಲ್ಲಿ ದೇವರನ್ನು ಕಾಣಬೇಕು ಎಂದು ಹೇಳಿದರು.

ಹುಬ್ಬಳ್ಳಿ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಶ್ರೀ ಕೃಷ್ಣ ಕೂಡ ತನ್ನ ಗುರುಗಳು ಪಾದ ಇಟ್ಟ ಭೂಮಿಯ ಮಣ್ಣನ್ನು ತಂದು ಪೂಜೆ ಮಾಡುತ್ತಿದ್ದ. ಆದ್ದರಿಂದ ಭಾರತ ದೇಶದಲ್ಲಿ ಗುರುವಿನ ಪೂಜೆಗೆ ಪೂಜನೀಯ ಸ್ಥಾನ ನೀಡಿದ್ದಾರೆ. ನಂಬಿಕೆಯಿಂದ ಎಲ್ಲರನ್ನು ಗೌರವದಿಂದ ಕಂಡು ಹೊಂದಾಣಿಕೆ ಜೀವನ ಮಾಡಿದರೆ ಮಾತ್ರ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬರಲು ಸಾಧ್ಯ ಎಂದರು.

ಹತ್ತು ದಿನಗಳ ಕಾಲ ಹನು-ಮನ ಧ್ಯಾನ ಎಂಬ ವಿಷಯ ಕುರಿತು ಪ್ರವಚನ ನೀಡಿದ ಬೆಂಗಳೂರಿನ ಸ್ಪಿರಿಚ್ಯುವಲ್ ಸೆಲ್ಯೂಷನ್ ಸೆಂಟರ್​ನ ಶ್ರೀ ರಾಮಚಂದ್ರ ಗುರೂಜಿ ಅವರನ್ನು ದೇವಸ್ಥಾನ ಆಡಳಿತ ಮಂಡಳಿಯವರು ಸನ್ಮಾನಿಸಿ ಗೌರವಿಸಿದರು.

ಶ್ರೀ ಮಾರುತಿ ದೇವಸ್ಥಾನದ ಭಜನಾ ನಾಟ್ಯ ಸೇವಾ ಸಂಘದ ಸದಸ್ಯರು, ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.