ಚಾಮರಾಜನಗರ: ಯೋಗ ಜನರ ಜೀವನ ವಿಧಾನವಾಗಿದ್ದು, ಆಧ್ಯಾತ್ಮಿಕ ಬೆಳವಣಿಗೆಗೆ ಯೋಗ ಸಹಕಾರಿಯಾಗಿದೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಎಂ.ಎನ್.ಚಂದ್ರ ಹೇಳಿದರು.
ತಾಲೂಕಿನ ಮಲ್ಲಯ್ಯನಪುರ ಸಮೀಪದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೈ ಭಾರತ್, ನೆಹರು ಯುವ ಕೇಂದ್ರ, ರಂಗಸೌರಭ ಹಾಗೂ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗ ಸಂಸ್ಕೃತ ಪದವಾದ ಯುಜ್ ನಿಂದ ಬಂದಿದ್ದು, ಇದರ ಅರ್ಥ ಒಗ್ಗೂಡಿಸುವುದು ಅಥವಾ ಸೇರಿಸುವುದು ಎಂದಾಗಿದೆ. ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸಲು ಯೋಗ ಒಂದು ಸಾಧನವಾಗಿದೆ. ಇದು ಕೇವಲ ದೈಹಿಕ ವ್ಯಾಯಾಮಗಳಲ್ಲ, ಆದರೆ ಇದು ಒಂದು ಜೀವನ ವಿಧಾನವಾಗಿದೆ. ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆಗಾಗಿ ಎಲ್ಲ ವಿದ್ಯಾರ್ಥಿಗಳು ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು ಎಂದರು.
ರಂಗಸೌರಭ ಸಂಸ್ಥೆ ಕಾರ್ಯದರ್ಶಿ ಎಸ್.ಗುರುರಾಜ್ ಮಾತನಾಡಿ, ಯೋಗ ನಮ್ಮ ಆರೋಗ್ಯ ವೃದ್ಧಿಸಲು ಸಹಕಾರಿಯಾಗುತ್ತದೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಯೋಗ ತರಬೇತಿದಾರ ಸಿ.ನಾಗರಾಜು ಅವರು ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಯೋಗಾಭ್ಯಾಸ ಮಾಡಿಸಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ವಿ.ಗರುಡರಾಜು, ನಿಲಯ ಪಾಲಕ ಎಸ್.ಎಂ.ರಾಜೇಶ್, ಶಿಕ್ಷಕರಾದ ನಿಂಗರಾಜು, ಸೌಮ್ಯ, ಎಂ.ಬಿ.ಲೀಲಾವತಿ, ರಶ್ಮಿ, ಮಹದೇವಸ್ವಾಮಿ, ನಟರಾಜು, ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.