ಜಿಲ್ಲೆ

ಆಧುನಿಕತೆಯಿಂದ ಜಾನಪದ ಕಲೆಗಳು ಕಣ್ಮರೆ

ಕುಶಾಲನಗರ: ಆಧುನಿಕ ಜೀವನ ಶೈಲಿಯಿಂದಾಗಿ ಜಾನಪದ ಕಲೆಗಳು, ಆಚಾರ-ವಿಚಾರಗಳು ನಶಿಸುತ್ತಿವೆ ಎಂದು ಕುಶಾಲನಗರ ಸರ್ಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಬಿ.ಲಿಂಗಮೂರ್ತಿ ಬೇಸರಿಸಿದರು.


ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೂಡಿಗೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಡಿ.ಜೆ.ಪದ್ಮನಾಭ ದತ್ತಿ ಕಾರ್ಯಕ್ರಮದಲ್ಲಿ ಕೊಡಗಿನ ಜಾನಪದ ಕಲೆಗಳ ಬಗ್ಗೆ ಉಪನ್ಯಾಸ ನೀಡಿದರು.


ಇಂದು ವಿದ್ಯಾರ್ಥಿಗಳಲ್ಲಿ ನಾಡಿನ ಪರಂಪರೆ ಹಾಗೂ ಸಾಹಿತ್ಯ ಸಂಸ್ಕೃತಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದರು.
ಕೊಡಗು ಜಿಲ್ಲೆಯ ಜಾನಪದ ಸಂಸ್ಕೃತಿ, ಆಚಾರ-ವಿಚಾರ ಮತ್ತು ಇಲ್ಲಿನ ಜನರ ಉಡುಗೆ-ತೊಡುಗೆಗಳು ದೇಶದಲ್ಲಿಯೇ ಹೆಸರಾಗಿವೆ. ಇಂತಹ ಪರಂಪರೆ ನಶಿಸದಂತೆ ಜೋಪಾನ ಮಾಡುವ ಕೆಲಸ ಇಂದಿನ ಪೀಳಿಗೆಯಿಂದ ಆಗಬೇಕಿದೆ ಎಂದರು.


ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, 1970ರ ದಶಕದಲ್ಲಿ ಕನ್ನಡ ಸಾಹಿತ್ಯವನ್ನು ಕೊಡಗು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿದ ವಿರಾಜಪೇಟೆಯ ಡಿ.ಜೆ.ಪದ್ಮನಾಭ ಅವರ ಕನ್ನಡ ನಾಡು ನುಡಿ ಸೇವೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೂಡಿಗೆಯ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಬಿ.ಬಸಪ್ಪ, ಕನ್ನಡ ನಾಡಿನ ಅದ್ದೂರಿ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ಜಾನಪದ ಕಲೆಗಳು ಹಾಗೂ ಜಾನಪದ ಕ್ರೀಡೆಗಳು ಹೆಚ್ಚು ಪಾತ್ರ ವಹಿಸಿವೆ ಎಂದರು.
ಅಧ್ಯಕ್ಷತೆಯನ್ನು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ ವಹಿಸಿದ್ದರು.


ಡಿ.ಜೆ.ಪದ್ಮನಾಭ ದತ್ತಿಯ ದಾನಿಗಳು ಹಾಗೂ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ, ಕೋಶಾಧಿಕಾರಿ ಶಬರೀಶ್ ಶೆಟ್ಟಿ, ಕುಶಾಲನಗರ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ನಿರ್ದೇಶಕ ವಿ.ಟಿ.ಮಂಜುನಾಥ, ಕುಶಾಲನಗರ ತಾಲೂಕಿನ ಕೋಶಾಧಿಕಾರಿ ಕೆ.ವಿ.ಉಮೇಶ್, ಹೆಬ್ಬಾಲೆ ಹೋಬಳಿ ಕಸಾಪ ಅಧ್ಯಕ್ಷ ಎಂ.ಎನ್.ಮೂರ್ತಿ, ಕಸಾಪ ಮಾಜಿ ಅಧ್ಯಕ್ಷ ಟಿ.ಕೆ.ಪಾಂಡುರಂಗ ಮತ್ತಿತರರಿದ್ದರು.