ಜಿಲ್ಲೆ

ಆಧುನಿಕತೆಯಲ್ಲಿ ನಶಿಸುತ್ತಿದೆ ಜನಪದ ಕಲೆ

ಹುಲಸೂರು: ಕಲೆಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಆಧುನಿಕ ಯುಗದಲ್ಲಿ ಜಾನಪದ ಕಲೆಗಳು ನಶಿಸಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ಬೇಲೂರದಲ್ಲಿ ಜೈ ಭವಾನಿ ಜಾತ್ರೆ ನಿಮಿತ್ತ ಬುಧವಾರ ರಾತ್ರಿ ಆಯೋಜಿಸಿದ್ದ ರಾಷ್ಟ್ರೀಯ ಜಾನಪದ ಉತ್ಸವದಲ್ಲಿ ಮಾತನಾಡಿ, ಭಾರತ ಸಂಸ್ಕೃತಿಯಲ್ಲಿ ಶ್ರೀಮಂತ ರಾಷ್ಟçವಾಗಿದೆ. ಕಲೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡು ಮಕ್ಕಳಿಗೆ ತಿಳಿಸಬೇಕು. ಆಗ ಗ್ರಾಮೀಣ ಭಾಗದಲ್ಲಿ ಜಾನಪದ ಕಲೆ ಹೆಚ್ಚು ಕಾಣಲು ಸಾಧ್ಯ ಎಂದರು.

ಬೇಲೂರದಲ್ಲಿ ಜಾತಿ, ಮತ, ಪಂಥ ಎನ್ನದೆ ಎಲ್ಲರೂ ಒಂದೆಡೆ ಸೇರಿ ೭೬ ವರ್ಷದಿಂದ ಜಾತ್ರೆ ನಡೆಸುತ್ತಿರುವುದು ಶ್ಲಾಘನೀಯ. ಜನಪದ ಕಲೆ ಧರ್ಮ ಹುಟ್ಟುವ ಮುಂಚೆ ಜಾನಪದ ಹುಟ್ಟಿಕೊಂಡಿದೆ. ಸನಾತನ ಕಾಲದಿಂದಲೂ ಹಾಡುಗಳ ಮೂಲಕ ಬೆಳೆದಿರುವ ಜಾನಪದ ಬೆಳೆಸಬೇಕಿದೆ ಎಂದರು.
ಜಾನಪದ ಪರಿಷತ್ ರಾಜ್ಯ ಆಡಳಿತ ಮಂಡಳಿ ಸದಸ್ಯ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ಜಾನಪದ ಕಲೆ, ಕಲಾವಿದರು ಉಳಿಯಬೇಕಾದರೆ, ಜಿಲ್ಲೆಯಲ್ಲಿ ಪ್ರತ್ಯೇಕ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಈ ಕುರಿತು ಸರ್ಕಾರದ ಮೇಲೆ ಒತ್ತಡ ಹೆಚ್ಚಬೇಕು. ಆಗ ಮಾತ್ರ ಕಲೆ, ಕಲಾವಿದರು ಉಳಿಯಲು ಸಾಧ್ಯ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾನಪದ ಕಲೆಗೆ ಬೀದರ್ ಜಿಲ್ಲೆ ನೀಡಿರುವ ಕೊಡುಗೆ ಅಪಾರ. ವಚನಕಾರರು ಜಾನಪದ ಭಾಷೆಯಲ್ಲಿ ವಚನ ಬರೆದಿದ್ದಾರೆ. ವಿಶ್ವಖ್ಯಾತಿಯ ಬಿದರಿ ಕಲೆ, ಭುಲಾಯಿ ಹಾಡು, ತತ್ವಪದ, ನಾಟಿ ವೈದ್ಯ, ಭೂತ ಕುಣಿತ, ಹುಲಿ ಕುಣಿತ, ಸುಗ್ಗಿ ಕುಣಿತ, ಲಾವಣಿ, ಬುಡಕಟ್ಟು ಸಮಾಜದವರಿದ್ದಾರೆ. ಈ ಭಾಗದ ಜಾನಪದ ಶ್ರೀಮಂತಿಕೆಯಿಂದ ಕೂಡಿದೆ ಎಂದರು.

ಶಾಸಕ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ನಮ್ಮ ದೇಶದ ಕಲೆ, ಸಂಸ್ಕೃತಿ ಉಳಿಸುವಲ್ಲಿ ಜಾನಪದ ಸಿಂಹಪಾಲು ಹೊಂದಿದೆ. ಜನಪದ ಉಳಿದರೆ ಮಾತ್ರ ದೇಶ ಮತ್ತು ರಾಷ್ಟ್ರದ ಸಂಸ್ಕೃತಿ ಉಳಿಯುತ್ತದೆ ಎಂದರು.
ಡಾ.ವಿಜಯಕುಮಾರ ಅಂತಪ್ಪನೋರ ಹಾಗೂ ವಿವಿಧ ರಾಜ್ಯಗಳ ಜಾನಪದ ಕಲಾತಂಡದ ಪ್ರಮುಖರನ್ನು ಗೌರವಿಸಲಾಯಿತು. ಧಾರವಾಡ ವಿವಿ ಕುಲಸಚಿವ ಡಾ.ಬಸವರಾಜ ಡೊಣ್ಣೂರ, ರಾಜಶೇಖರ ಹುಲ್ಲೂರ ಮಾತನಾಡಿದರು. ಪ್ರಮುಖರಾದ ಶಿವಕುಮಾರ ದೇವರು, ದಾನೇಶ್ವರಿ, ಉದ್ಯಮಿ ಗುರುನಾಥ ಕೊಳ್ಳುರ, ಗ್ರಾಪಂ ಅಧ್ಯಕ್ಷೆ ಕರುಣಾಬಾಯಿ ಪರಪ್ಪ, ನಾಗಪುರ ಸಂಸ್ಕೃತಿಕ ಕೇಂದ್ರದ ಡಾ.ರಾಜಕುಮಾರ ಹೆಬ್ಬಾಳೆ, ಉತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ, ಶಿವರಾಜ ಖಪಲೆ, ಸಂಜು ಸೂಗುರೆ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರೆ, ಅಣ್ಣೆಪ್ಪ ಖಾನಾಪುರ, ರಾಜಕುಮಾರ ಹಿರೇಮಠ, ಮಲ್ಲಮ್ಮ ಸಂತಾಜಿ, ಶಿವಶರಣಪ್ಪ, ಸಂಜಯ ಮಹಾಜನ, ರಾಮಲಿಂಗ ಸಾಗಾವೆ, ಸೂರ್ಯಕಾಂತ ಶಾಸ್ತಿ, ರಾಜಕುಮಾರ ಹುಲ್ಲೂರ ಇತರರಿದ್ದರು. ಮಲ್ಲಮ್ಮ ಹಲಂಗೆ ಪ್ರಾರ್ಥನೆ ಗೀತೆ ಹಾಡಿದರು. ಅಶೋಕ ವಕಾರೆ ಸ್ವಾಗತಿಸಿದರು. ಬಸವರಾಜ ಗುಂಗೆ ನಿರೂಪಣೆ ಮಾಡಿದರು.