ಜಿಲ್ಲೆ

ಆಧುನಿಕತೆಗೆ ಹೊಂದಿಕೊಳ್ಳುತ್ತಿರುವ ಆಕಾಶವಾಣಿ

ಮೈಸೂರು

ಕಾಲಕ್ಕೆ ತಕ್ಕಂತೆ ಆಕಾಶವಾಣಿ ಸಹ ಆಧುನೀಕರಣಗೊಂಡಿದ್ದು, ಒಟಿಟಿ ಫ್ಲಾಟ್‌ಫಾರ್ಮ್, ಮೊಬೈಲ್ ಆ್ಯಪ್‌ನಲ್ಲೂ ಆಕಾಶವಾಣಿ ಕಾರ್ಯಕ್ರಮ ಲಭ್ಯತೆ ಇದೆ ಎಂದು ನವದೆಹಲಿಯ ಆಕಾಶವಾಣಿ ಸುದ್ದಿ ವಿಭಾಗದ ಮಹಾನಿರ್ದೇಶಕಿ ಡಾ.ಪ್ರಜ್ಞಾ ಪಾಲಿವಾಲ್ ಗೌರ್ ತಿಳಿಸಿದರು.

ಯಾದವಗಿರಿಯಲ್ಲಿ ಇರುವ ಮೈಸೂರು ಆಕಾಶವಾಣಿ ಕೇಂದ್ರಕ್ಕೆ 90 ವರ್ಷ ತುಂಬಿದ ಸಂಭ್ರಮದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ‘ನುಡಿ ನಾದ ಸಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕ ಸಮೂಹ ಸಂವಹನ ತಂತ್ರಜ್ಞಾನ ಕಾಲದಲ್ಲಿ ಆಕಾಶವಾಣಿ ಬದಲಾಗಿದೆ. ಒಟಿಟಿ ಫ್ಲಾಟ್‌ಫಾರ್ಮ್ ಮೂಲಕ ದೇಶದ ಎಲ್ಲ ಆಕಾಶವಾಣಿ ಕೇಂದ್ರಗಳ ಸುದ್ದಿ, ಮನೋರಂಜನಾ ಕಾರ್ಯಕ್ರಮ ಕೇಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಆ್ಯಪ್ ಮೂಲಕ ಮೊಬೈಲ್‌ನಲ್ಲಿ ಆಕಾಶವಾಣಿ ಕಾರ್ಯಕ್ರಮ ದೊರೆಯುತ್ತಿದೆ. ಇದರೊಂದಿಗೆ ನೂತನ ತಂತ್ರಜ್ಞಾನಗಳನ್ನು ವೇಗವಾಗಿ ಅಳವಡಿಸಿಕೊಳ್ಳುವ ಮೂಲಕ ಆಕಾಶವಾಣಿಯೂ ನವತನಕ್ಕೆ ಹೊಂದಿಕೊಳ್ಳುತ್ತಿದೆ ಎಂದು ತಿಳಿಸಿದರು.

ಕಾಲ ಎಷ್ಟೇ ಬದಲಾದರೂ ಆಕಾಶವಾಣಿಯೂ ಮೊದಲಿನಂತೆಯೇ ನೈಜ ಪತ್ರಿಕೋದ್ಯಮಕ್ಕೆ ಈಗಲೂ ಬದ್ಧವಾಗಿದ್ದು, ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ. ನಾಡಿನ ಕಲೆ, ಪರಂಪರೆ, ಸಂಸ್ಕೃತಿಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಹೊಸ ತಲೆಮಾರಿಗೆ ಸಾಂಸ್ಕೃತಿಕ ಶ್ರೀಮಂತಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಎಲೆಮರೆ ಕಾಯಿಯಂತೆ ಇರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ಅವರಲ್ಲಿ ಅಡಕವಾಗಿರುವ ಕಲೆ ಅನಾವರಣಕ್ಕೆ ಆಕಾಶವಾಡಿ ಅನುಕೂಲ ಮಾಡಿಕೊಟ್ಟಿದೆ.

ಕನ್ನಡ ಭಾಷಾ ಬೆಳವಣಿಗೆಗೆ ತನ್ನದೆ ಆದ ಕೊಡುಗೆಯನ್ನು ಇದು ನೀಡಿದೆ. ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಎಲ್ಲ ವರ್ಗದ ಶೋತೃಗಳನ್ನು ಒಳಗೊಂಡಿದೆ. ಕರೊನಾ ಕಾಲದಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಸಿ ಜನರಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯ ಮಾಡಿದೆ ಎಂದು ಹೇಳಿದರು.

ದಂತ ಕಥೆಗಳಾದ ಕವಿಗಳು, ದಾರ್ಶನಿಕರು, ತತ್ವಜ್ಞಾನಿಗಳ ವಿಚಾರ-ಚಿಂತನೆಗಳನ್ನು ನಾಡಿನ ಮೂಲೆ-ಮೂಲೆಗೆ ತಲುಪಿಸುವ ಕೆಲಸವನ್ನು ಮೈಸೂರು ಆಕಾಶವಾಣಿ ಮಾಡಿದೆ.

ತನ್ಮೂಲಕ ಅಂತಹವರ ಮಾತುಗಳಿಂದ ಜನರು ಸ್ಫೂರ್ತಿಗೊಂಡು ಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಗಿದೆ. ಆಕಾಶವು ಎಂದಿಗೂ ಕೆಳಗೆ ಇಳಿದು ಬರುವುದಿಲ್ಲ. ಅದೇ ರೀತಿ ಮೈಸೂರು ಆಕಾಶವಾಣಿಯೂ ಇನ್ನೂ ಮೇಲೆ-ಮೇಲೆ ಸಾಗಲಿ. ನೂರಾರು ವರ್ಷಗಳನ್ನು ಸಂಭ್ರಮದಿಂದ ಆಚರಣೆ ಮಾಡಿಕೊಳ್ಳಲಿ ಎಂದು ಹಾರೈಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕಾಲ ಬದಲಾಗಿದ್ದರೂ ಆಕಾಶವಾಣಿಯ ಖ್ಯಾತಿಯೂ ಹಾಗೇ ಉಳಿದುಕೊಂಡಿದೆ ಎಂದರು.

ಸಾಧಕರಿಗೆ ಸನ್ಮಾನ:

ಮೈಸೂರು ಆಕಾಶವಾಣಿಯನ್ನು ಪ್ರಾರಂಭಿಸಿದ ಡಾ.ಎಂ.ವಿ.ಗೋಪಾಲಸ್ವಾಮಿ, ರೇಡಿಯೋ ಕೇಂದ್ರಕ್ಕೆ ಆಕಾಶವಾಣಿ ಎಂದು ನಾಮಕರಣ ಮಾಡಿದ ನಾ.ಕಸ್ತೂರಿ ಅವರ ಸಾಧನೆಯನ್ನು ಸ್ಮರಿಸಿ, ಅವರ ಕುಟುಂಬ ವರ್ಗದವರನ್ನು ಸನ್ಮಾನಿಸಲಾಯಿತು. ಜತೆಗೆ, ಡಾ.ಆರ್.ವಿಶ್ವೇಶ್ವರನ್, ಡಾ.ಪಿ.ಕೆ.ರಾಜಶೇಖರ್, ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ಡಾ.ಗಾಂಧಿದಾಸ್, ಮಹೇಶ್ ಚಂದ್ರಗುರು, ಪಿ.ರಮೇಶ್, ಡಾ.ಮಣಿಕರ್ಣಿಕ, ಪ್ರೊ.ಸಿ.ನಾಗಣ್ಣ, ಡಾ.ಎಂ. ಪುಷ್ಪಾವತಿ, ರೆವರೆಂಡ್ ಾ.ಅಲೆಕ್ಸ್ ಪ್ರಶಾಂತ್ ಸಿಕ್ವೇರ, ಸೈಯದ್ ನಾಸಿರ್ ಅಹಮದ್, ಎನ್.ನಾಗಚಂದ್ರ ಅವರನ್ನು ಗೌರವಿಸಲಾಯಿತು.

ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸಿ, ಮೈಸೂರು ಆಕಾಶವಾಣಿ ಉಪ ನಿರ್ದೇಶಕ ಎಸ್.ಎಸ್.ಉಮೇಶ್, ಸಹಾಯಕ ನಿರ್ದೇಶಕ ಟಿ.ವಿ.ವಿದ್ಯಾಶಂಕರ್,ಹಿರಿಂು ಉದ್ಘೋಷಕ ಡಾ.ಮೈಸೂರು ಉಮೇಶ್, ಕಾಂರ್ುಕ್ರಮ ಸಂಯೋಜಕ ಕೇಶವಮೂರ್ತಿ, ಬೆಂಗಳೂರು ಆಕಾಶವಾಣಿ ಕೇಂದ್ರದ ಉಪನಿರ್ದೇಶಕ ಡಾ.ಎನ್.ರಘು ಇನ್ನಿತರರಿದ್ದರು.