ಜಿಲ್ಲೆ

ಆಧುನಿಕತೆಗೆ ನಲುಗಿದೆ ಜಾನಪದ

ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಅನಿಸಿಕೆ, ಚಕೋರ ಸಾಹಿತ್ಯ ವಿಚಾರ ವೇದಿಕೆ ಉದ್ಘಾಟನೆ

ತುಮಕೂರು: ಜಾನಪದ ಬಹುದೊಡ್ಡ ಸಂಸತಿ. ಕಾಲದ ಧೂಳಿನಿಂದ, ಆಧುನಿಕತೆಯ ಹಾವಳಿಯಲ್ಲಿ ಜಾನಪದ ಸೌಂದರ್ಯ ನಲುಗಿಹೋಗಿದೆ ಎಂದು 87ನೇ ಅಖಿಲ

ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ, ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗವು ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ "ಚಕೋರ'ಸಾಹಿತ್ಯ ವಿಚಾರ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಸಾಹಿತ್ಯವು ಅನಕ್ಷರಸ್ಥರಿಂದ ಸೃಷ್ಟಿಯಾದದ್ದು. ಅದರ ವಯಸ್ಸನ್ನು ಹೇಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಮನಸ್ಸಿನ ಚಾಂಚಲ್ಯದಿಂದ ಜಾನಪದ ಸಂಸತಿ ಮರೆಯುತ್ತಿರುವುದು ವಿಷಾದನೀಯ. ಅರಿವನ್ನು ಸೇವಿಸಿ ಬದುಕಬೇಕೆಂಬುದು ಈಗಿನ ಯುವ ಸಮೂಹಕ್ಕೆ ತಿಳಿಯದ ವಿಷಯವಾಗಿದೆ. ಜಾನಪದರು ಅನುಕರಣೆಯಿಂದ ಸಂಸತಿಗೆ ಸತ್ವ ತಂದುಕೊಟ್ಟವರಲ್ಲ. ಅದೊಂದು ಸಹಜ ಹೂವಿನ ರೀತಿ. ನಗರದಲ್ಲಿ ಕೂತು ಜಾನಪದ ಸೌಂದರ್ಯ ಸವಿಯಲು ಸಾಧ್ಯವಿಲ್ಲ. ಕೇಂದ್ರೀಕೃತ ಮನಸ್ಸಿನಿಂದ ಜಾನಪದ ಸಾಹಿತ್ಯವನ್ನು ಕಲಿಯಬಹುದು ಎಂದು ತಿಳಿಸಿದರು. ಜಾನಪದವೆಂದರೆ ಸಮಾನತೆ, ಗೌರವ, ಪರಿಸರ ಕಾಳಜಿ, ಪ್ರೇಮ, ಸಂಬಂಧ, ಮೌಲ್ಯ, ನೈತಿಕತೆ. ಹುಟ್ಟು ಸಾವಿನ ಹಂಗಿಲ್ಲದೆ ಭೂತಾಯಿಯನ್ನು ನಂಬಿ ಬದುಕಿದ ಜಾನಪದರು, ದೇವರನ್ನು ಆಡು ಪದಗಳಿಂದ ಏಳಿಸುವ ಶಕ್ತಿ ಹೊಂದಿದವರು ಎಂದರು.

ವಯಸ್ಸಿನ ಹಂಗಿಲ್ಲ: ಕನ್ನಡದ ಹಲವು ಮಹಾ ಕಾವ್ಯಗಳನ್ನು ಅನಕ್ಷರಸ್ಥ ದಲಿತ ಹೆಣ್ಣುಮಕ್ಕಳು ಕಟ್ಟಿದರು. ನಮ್ಮನ್ನು ಆಳಿದವರು ಜಾನಪದರ ಕಾವ್ಯಗಳನ್ನು ಜನರಿಗೆ ತಲುಪದ ರೀತಿ ನೋಡಿಕೊಂಡರು. ವಯೋಮಾನದ ಹಂಗಿಲ್ಲದ ಜಾನಪದ ಸಾಹಿತ್ಯದಲ್ಲಿ ನೋವು, ಸಂಕಟ, ಸಂತಾಪ, ಸಂತೋಷವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್​. ಎನ್​. ಮುಕುಂದರಾಜ್​ ತಿಳಿಸಿದರು. ಕವಿಯಾಗಲು ದೈವಕೃಪೆ ಬೇಕಿಲ್ಲವೆಂದು ಜಾನಪದರು ತಿಳಿಸಿಕೊಟ್ಟರು. ಕನ್ನಡ ಸಾಹಿತ್ಯ ಪರಂಪರೆಯ ಬಸವ ಶರಣರು, ದಾಸರು, ಜಾನಪದರು ಸಂವಿಧಾನವನ್ನು ಸಾವಿರಾರು ವರ್ಷಗಳ ಹಿಂದೆಯೇ ತಮ್ಮ ಕಾವ್ಯಗಳಲ್ಲಿ ನಿರೂಪಿಸಿದ್ದಾರೆ. ಅಂದಿನ ಮಹಾ ಕಾವ್ಯಗಳೇ ಇಂದಿನ ಕಾನೂನಿನ ವಕ್ತಾರರು. ಆದಿಪುರಾಣ, ವಿಕ್ರಮಾರ್ಜುನ ವಿಜಯ, ಕವಿರಾಜಮಾರ್ಗ ಕಾವ್ಯಗಳಲ್ಲಿ ಕನ್ನಡಿಗರ ವ್ಯಕ್ತಿತ್ವ ಪರಿಚಯ ದಟ್ಟವಾಗಿದೆ ಎಂದರು.

ಕುಲಸಚಿವೆ ನಾಹಿದ ಜಮ್​, ಜಮ್​, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್​, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್​ ಎಂ.ಶೇಟ್​, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಸುಮಾ ಸತೀಶ್​, ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕಿ ಮಲ್ಲಿಕಾ ಬಸವರಾಜು, ಡಾ.ನಾಗಭೂಷಣ ಬಗ್ಗನಡು, ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೆಂಕಟರೆಡ್ಡಿ ರಾಮರೆಡ್ಡಿ ಉಪಸ್ಥಿತರಿದ್ದರು.