ಬೀರೂರಿನಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಕೆ.ಎಂ.ವಿನಾಯಕ್ ಉದ್ಘಾಟಿಸಿದರು. ಬಿ.ಕೆ.ಶಶಿಧರ್, ಬಿ.ಎಚ್.ಶ್ರೀನಿವಾಸ್, ಮಂಜುನಾಥ್ ಇತರರಿದ್ದರು. 
ಜಿಲ್ಲೆ

ಆಧುನಿಕತೆ ಬೆಳೆದಂತೆ ಪರಭಾಷೆಗಳ ವ್ಯಾಮೋಹ

ಬೀರೂರು: ಕನ್ನಡ ಭಾಷೆ ಉಳಿವಿಗೆ ಆಟೋ ಚಾಲಕರ ಕೊಡುಗೆ ಅಪಾರ ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಎಂ.ವಿನಾಯಕ್ ತಿಳಿಸಿದರು.

ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಆಧುನಿಕತೆ ಬೆಳೆದಂತೆ ಪರಭಾಷೆಗಳ ವ್ಯಾಮೋಹ ಹೆಚ್ಚಾಗುತ್ತಿದ್ದು, ಮಾತೃಭಾಷೆ ಮೇಲೆ ಕೀಳರಿಮೆಯೂ ಹೆಚ್ಚುತ್ತಿದೆ. ನಾಡಿನ ಇತಿಹಾಸ, ಭಾಷೆ, ಸಂಸ್ಕೃತಿ, ಕಲೆಗಳ ಬಗ್ಗೆ ನಮ್ಮವರಿಗೆ ಅರಿವು ಮೂಡಿಸಬೇಕಾದ ಅನಿವಾರ್ಯ ಇದೆ. ಆಟೋ ಚಾಲಕರು ಭಾಷೆ ಮೇಲಿನ ಪ್ರೀತಿಯನ್ನು ನವೆಂಬರ್‌ಗೆ ಮಾತ್ರವಲ್ಲದೆ ವರ್ಷವಿಡೀ ಭಾಷೆ ಬೆಳೆಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.

ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಬಿ.ಕೆ.ಶಶಿಧರ್ ಮಾತನಾಡಿ, ಊರಿಗೆ ಪ್ರವಾಸಿಗರು ಅಥವಾ ಪ್ರಯಾಣಿಕರು ಬಂದರೆ ಅವರನ್ನು ಸ್ವಾಗತಿಸುವುದೇ ಆಟೋ ಚಾಲಕರು. ಅವರಿಂದಾಗಿ ಕನ್ನಡ ಭಾಷೆ ಗ್ರಾಮೀಣ ಪ್ರದೇಶಗಳಲ್ಲಿ ಗಟ್ಟಿ ನೆಲೆ ಉಳಿಸಿಕೊಂಡಿದೆ. ಆಟೋ ಚಾಲಕರ ಏನೇ ಸಮಸ್ಯೆ ಇದ್ದರೂ ಪರಿಹರಿಸಲು ಮತ್ತು ನಿಲ್ದಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಶಾಸಕರು ಕೂಡ ಬದ್ಧರಾಗಿದ್ದು, ಅವರ ನೆರವಿನಿಂದ ನಿಮ್ಮ ಒಳಿತಿಗಾಗಿ ನಾನು ಶ್ರಮಿಸುತ್ತೇನೆ ಎಂದು ಹೇಳಿದರು.

ಪಿಎಸ್‌ಐ ಜಿ.ಆರ್.ಸಜಿತ್‌ಕುಮಾರ್ ಮಾತನಾಡಿ, ಸಂಚಾರಿ ನಿಯಮಗಳ ಪಾಲನೆಯೊಂದಿಗೆ ಬದುಕನ್ನು ಹಸನಾಗಿಸಿಕೊಳ್ಳಲು ಶ್ರಮಿಸಿ ಎಂದರು.

ಶ್ರೀ ಭುವನೇಶ್ವರಿ ಸ್ತಬ್ಧ ಚಿತ್ರವನ್ನು ಪಟ್ಟಣದಲ್ಲಿ ಕಲಾ ತಂಡಗಳೊಂದಿಗೆ ಮೆರೆವಣಿಗೆ ಮಾಡಲಾಯಿತು. ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಿ.ಎಚ್.ಶ್ರೀನಿವಾಸ್, ಉಪಾಧ್ಯಕ್ಷ ಬಿ.ಎಲ್.ರವಿಕುಮಾರ್, ಸೋಮಪ್ಪ, ಆರ್.ಮಂಜುನಾಥ್, ರಾಜು, ಎಸ್.ಮಂಜುನಾಥ್, ಮುರುಗೇಶ್, ರವಿ, ಶಿವಕುಮಾರ್ ಇದ್ದರು.