ಸಕ್ಕರೆ ಕಾರ್ಖಾನೆ ತಾಂತ್ರಿಕತೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ
ಬೆಳಗಾವಿ: ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳು ಲಾಭದಾಯಕವಾಗಿ ಮುನ್ನಡಿಯಲು ಸಕ್ಕರೆ ಉತ್ಪಾದನೆಯ ವೆಚ್ಚವನ್ನು ಕಡಿಮೆಗೊಳಿಸುವುದು ಮುಖ್ಯ ಹಾಗೂ ಸವಾಲಿನ ಕೆಲಸವಾಗಿದೆ ಎಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ.ಆರ್. ಬಿ. ಖಾಂಡಗಾವೆ ಹೇಳಿದರು.
ಅವರು ಶನಿವಾರ ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಹಾಗೂ ಸಿ.ಜಿ. ಪಾವರ್ ಮತ್ತು ಇಂಡಸ್ಟ್ರೀಸ್ ಸೊಲ್ಯೂಶನ್ ಲಿ., ಇವರ ಸಹಯೋಗದಲ್ಲಿ ಶನಿವಾರ ರಂದು ಸಕ್ಕರೆ ಕಾರ್ಖಾನೆಯಲ್ಲಿ ಬಳಸುವ ಎಲ್‌ಟಿ ಮೋಟರ್, ಎಲ್‌ಟಿ ಮೋಟರ್ ಕಾರ್ಯದಕ್ಷತೆ, ಹೆಚ್‌ಟಿ ಮೋಟರ್, ಡ್ರೈವ್ ಮತ್ತು ಸಾಪ್ಟ್ ಸ್ಟಾಟರ್ ಕುರಿತು ಸಕ್ಕರೆ ಕಾರ್ಖಾನೆಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳಿಗೆ ಒಂದು ದಿನದ ಜಂಟಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ತಂತ್ರಜ್ಞಾನವಿರುವ ಹಾಗೂ ಉತ್ತಮ ಕಾರ್ಯದಕ್ಷತೆಯುಳ್ಳ ವಿದ್ಯುತ್ ಉಪಕರಣಗಳು, ಮೋಟರ್ ಡ್ರೈವ್‌ಗಳನ್ನು ಬಳಸುವುದರಿಂದ ವಿದ್ಯುತ್ ಶಕ್ತಿಯ ಬಳಕೆಯನ್ನು ಕಡಿಮೆಗೊಳಿಸಬಹುದು, ಇದರಿಂದ ಉತ್ಪಾದನೆ ವೆಚ್ಚವು ಕಡಿಮೆಯಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಕಾರ್ಯಗಾರವು ಮಹತ್ವ ಪಾತ್ರವಹಿಸಿದ್ದು, ಉಪಕರಣಗಳ ಉತ್ಪಾದಕರು ಹಾಗೂ ಕಾರ್ಖಾನೆಯ ಗ್ರಾಹಕರ ಮಧ್ಯೆ ಸಂವಹಣೆಗೆ ಉತ್ತಮ ವೇದಿಕೆಯಾಗಿದೆ. ಇಲ್ಲಿ ಹಾಜರಿರುವ ಎಲ್ಲ ತಾಂತ್ರಿಕ ಸಿಬ್ಬಂದಿಗಳು ಈ ಉಪಕರಣಗಳ ಬಗೆಗಿನ ಮಾಹಿತಿಯನ್ನು ತಂತ್ರಜ್ಞರಿಂದ ಪಡೆದು ತಾಂತ್ರಿಕ ಸಿಬ್ಬಂದಿಗಳು ಕಾರ್ಖಾನೆಯ ಕಾರ್ಯಕ್ಷಮತೆಯ ಅಭಿವೃದ್ಧಿಗೆ ಸಹಕರಿಸಬೇಕೆಂದರು. ಈ ತರಬೇತಿ ಕಾರ್ಯಾಗಾರದಲ್ಲಿ ಸಿ.ಜಿ. ಪಾವರ್ ಸಂಸ್ಥೆಯವರು ಸಕ್ಕರೆ ಕಾರ್ಖಾನೆಯಲ್ಲಿ ಆಟೋಮೇಶನ್ ಪ್ರಾಮುಖ್ಯತೆ, ಮೋಟರ್ ಮತ್ತು ಡ್ರೈವ್‌ಗಳ ನಿರ್ವಹಣೆ ಮತ್ತು ಅವುಗಳ ಕಾರ್ಯದಕ್ಷತೆಯನ್ನು ಹೆಚ್ಚಿಸುವ ಕುರಿತು ವಿವರವಾಗಿ ತರಬೇತಿ ನೀಡಿದರು. ಇಂಡಸ್ಟ್ರೀಸ್ ಸೊಲ್ಯೂಶನ್ ಲಿ.ನ ಆದಿತ್ಯ ಬಸ್ತಿ, ಸಯ್ಯದ ಶಫಿ, ರಮಾಕಾಂತ ಮಿಶ್ರಾ, ಸಂಸ್ಥೆಯ ಸಿಬ್ಬಂದಿ ಹಾಗೂ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ವಿವಿಧ ಕಾರ್ಖಾನೆಗಳಿಂದ ಸುಮಾರು 100 ತಾಂತ್ರಿಕ ಸಿಬ್ಬಂದಿಗಳು ಭಾಗವಹಿಸಿದರು.