ಕಲಬುರಗಿ: ಆಸ್ಪತ್ರೆಗಳಿಗೆ ಫಾರ್ಮಸಿ ಮುಖವಾಣಿ ಇದ್ದಂತೆ, ಆದರೆ ಇದಕ್ಕೆ ಪ್ರಾಧಾನ್ಯತೆ ದೊರೆಯುತ್ತಿಲ್ಲ. ಔಷಧ ಸಂಗ್ರಹಕ್ಕೆ ಸೂಕ್ತ ಸ್ಥಳಾವಕಾಶ ಸಿಗುತ್ತಿಲ್ಲ. ಸುಸಜ್ಜಿತ ಆಸ್ಪತ್ರೆಗೆ ಆಧುನಿಕ ಫಾರ್ಮಸಿ ಅಗತ್ಯವಿದೆ ಎಂದು ಜಿಮ್ಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ.ಆರ್. ಹೇಳಿದರು.
ವಿಜ್ಞಾನ ಕೇಂದ್ರದಲ್ಲಿ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಜಿಲ್ಲಾ ಶಾಖೆಯಿಂದ ವಿಶ್ವ ಆರೋಗ್ಯ ಸೇವೆಯಲ್ಲಿ ಫಾರ್ಮಾಸಿಸ್ಟ್ ಪಾತ್ರ ಘೋಷವಾಕ್ಯದೊಂದಿಗೆ ಭಾನುವಾರ ಆಯೋಜಿಸಿದ್ದ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆಯಲ್ಲಿ ಮಾತನಾಡಿ, ಜಿಮ್ಸ್ನಲ್ಲಿ ಸಿಬ್ಬಂದಿ ಕೊರತೆ, ವಿಸ್ತರಣೆಗೆ ಸ್ಥಳಾವಕಾಶವಿಲ್ಲ. ಇಂದಿಗೂ ೭೫೦ ಹಾಸಿಗೆ ಆಸ್ಪತ್ರೆಯಾಗಿ ಉಳಿದಿದೆ. ಜನಸಂಖ್ಯೆ ಆಧಾರದ ಮೇಲೆ ಇನ್ನೂ ೭೫೦ ಹಾಸಿಗೆಯ ಆಸ್ಪತ್ರೆ ಜರೂರಿ ಇದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಗುಲ್ಬರ್ಗ ವಿಶ್ವವಿದ್ಯಾಲಯದ ಬಳಿ ನಿರ್ಮಾಣಗೊಳ್ಳಲಿದೆ. ಸಿಟಿಯಿಂದ ಬಹುದೂರ ಇರುವುದರಿಂದ ಎಲ್ಲರಿಗೂ ತೊಂದರೆಯಾಗಲಿದೆ. ಇಂತಹ ಆಸ್ಪತ್ರೆಗಳು ಬಹುತೇಕ ಸರ್ಕಾರಿ ಆಸ್ಪತ್ರೆ ಅಕ್ಕಪಕ್ಕದಲ್ಲಿದ್ದರೆ ಅನುಕೂಲ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಬಾಡಿಗೆ ಆಧಾರದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ವಂತ ಕಟ್ಟಡ ಆದರೆ ಮಾದರಿ ಫಾರ್ಮಸಿ ಮಾಡಬೇಕು. ಮುಂದಿನ ದಿನಗಳಲ್ಲಿ ಕಾಗದ ರಹಿತ ಇ-ಆಸ್ಪತ್ರೆ ಮಾಡಬೇಕಿದೆ. ಜಿಮ್ಸ್ ಆಸ್ಪತ್ರೆ ಮಹಡಿಗೊಂದು ಕಂಪ್ಯೂಟರ್ ಒದಗಿಸುವ ಮೂಲಕ ಕಾಗದರಹಿತ ಕೆಲಸ ಮಾಡಲು ಸಿದ್ಧತೆ ನಡೆದಿದೆ ಎಂದು ವಿವರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಭಾಗೀಯ ಸಹ ನಿರ್ದೇಶಕ ಡಾ.ಅಂಬಾರಾಯ ರುದ್ರವಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಬುರಗಿಗೆ ಸರ್ಕಾರಿ ಔಷಧ ಮಹಾವಿದ್ಯಾಲಯ ಮಂಜೂರಾಗಿದೆ. ಆಸ್ಪತ್ರೆಗಳಲ್ಲಿ ಫಾರ್ಮಾಸಿಸ್ಟ್ ಪಾತ್ರ ಪ್ರಮುಖವಾಗಿದ್ದು, ಫಾರ್ಮಾಸಿಸ್ಟ್ಗಳಿಲ್ಲದಿದ್ದರೆ ವೈದ್ಯರಿಗೂ ಕೆಲಸವಿಲ್ಲ. ಎಲ್ಲರೂ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ್ ಮಾತನಾಡಿ, ಹೊಸ-ಹೊಸ ನಿಯಮಗಳು ಜಾರಿಗೆ ಬರುತ್ತವೆ. ಹೊಸ ವ್ಯಾಕ್ಸಿನ್‌ಗಳು ಬರುತ್ತವೆ. ಇಂತಹ ಸಮಯದಲ್ಲಿ ಫಾರ್ಮಾಸಿಸ್ಟ್ ಪಾತ್ರ ಪ್ರಮುಖವಾಗಿದ್ದು, ಜವಾಬ್ದಾರಿಯುತವಾಗಿ ನಿರ್ವಹಿಸಿಕೊಂಡು ಹೋಗುತ್ತೀರಿ ಎಂಬ ವಿಶ್ವಾಸವಿದೆ. ವೈದ್ಯರಿಗೆ ಫಾರ್ಮಾಸಿಸ್ಟ್ಗಳು ಬೆನ್ನೆಲುಬಾಗಿದ್ದು, ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.
ಅಖಿಲ ಭಾರತ ಸರ್ಕಾರಿ/ಅರೆ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಬಿ.ಎಸ್.ದೇಸಾಯಿ ಮಾತನಾಡಿ, ಕಲಬುರಗಿಯಲ್ಲಿ ಕೇಂದ್ರೀಯ ಔಷಧಿ ಉಗ್ರಾಣ ನಿರ್ಮಾಣವಾಗಬೇಕು. ಆಸ್ಪತ್ರೆಗೆ ಬರುವ ಔಷದ ಸ್ಟೋರ್ ಮಾಡುವ ವ್ಯವಸ್ಥೆ ಇಲ್ಲ. ಕೋಲ್ಡ್ ವಾತಾವರಣದಲ್ಲಿ ಔಷದ ಸಂಗ್ರಹವಾಗಬೇಕು. ಇಲ್ಲವಾದಲ್ಲಿ ಹಾಳಾಗುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾಧ್ಯಕ್ಷ ಸಂತೋಷಕುಮಾರ ಕುಸುಮಾ ಪ್ರಾಸ್ತಾವಿಕ ಮಾತನಾಡಿ, ಫಾರ್ಮಾಸಿಸ್ಟ್ಗಳಿಗೆ ಎಬಿಆರ್‌ಕೆ ಇನ್‌ಸೆಂಟಿವ್ ನೀಡಬೇಕು. ಫಾರ್ಮಸಿಗಳಿಗೆ ಎಸಿ ಅಳವಡಿಸಬೇಕು. ಜಿಮ್ಸ್ ಆಸ್ಪತ್ರೆ ಕೆಳಮಹಡಿಯಲ್ಲಿ ಫಾರ್ಮಸಿ ವೇರ್‌ಹೌಸ್ ಮಾಡಬೇಕು ಎಂದು ಮನವಿ ಮಾಡಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾತೋಶ್ರೀ ತಾರಾಬಾಯಿ ರಾಂಪುರೆ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ನಿತಿನ್ ಮಾಹೂರಕರ್ ಉಪನ್ಯಾಸ ನೀಡಿದರು.
ಜಿಮ್ಸ್ ಆಸ್ಪತ್ರೆ ಫಾರ್ಮಸಿ ಸಹಾಯಕ ನಿರ್ದೇಶಕ ನರಸಿಂಹರಾಜು, ಉಪ ಮುಖ್ಯ ಫಾರ್ಮಸಿ ಅಧಿಕಾರಿ ಸಾವನಕುಮಾರ್, ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಪ್ರಕಾಶ ಜಿ.ಕೆ ಇತರರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರೇವಣಸಿದ್ಧೇಶ್ವರ ಹಿರೇಮಠ್ ಸ್ವಾಗತಿಸಿದರು. ಮಾಲಾಶ್ರೀ ಪ್ರಾರ್ಥಿಸಿದರು.