ಜಿಲ್ಲೆ

ಆಧುನಿಕ ತಂತ್ರಜ್ಞಾನದತ್ತ ಇರಲಿ ಚಿತ್ತ

ಸಾಗರ: ಅಡಕೆ ಬೆಳೆಗಾರರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ತುರ್ತು ಸಂದರ್ಭ ಎದುರಾಗಿದೆ. ಕೃಷಿ ಕೂಲಿಕಾರ್ವಿುಕರ ಕೊರತೆ ಇರುವ ಸಂದರ್ಭದಲ್ಲಿ ಅಡಕೆ ಬೆಳೆಗಾರರು ಹೊಸ ಹೊಸ ಆವಿಷ್ಕಾರಗಳ ಮೊರೆ ಹೋಗುವುದು ಅನಿವಾರ್ಯ ಎಂದು ಆಪ್ಸ್​ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಆಪ್ಸ್​ಕೋಸ್​ನಿಂದ ಅಡಕೆ ಕೊಯ್ಯಲು, ಔಷಧ ಸಿಂಪಡಣೆ ಹಾಗೂ ತೆಂಗಿನ ಕಾಯಿ ಕೀಳಲು ಕಾರ್ಬನ್ ಫೈಬರ್ ದೋಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

60 ಅಡಿ ಎತ್ತರದ ಈ ದೋಟಿಯಿಂದ ಅಡಕೆ ಕೊಯ್ಯಲು, ಔಷಧ ಸಿಂಪಡಿಸಲು ಸಾಧ್ಯ. ಒಬ್ಬರೇ ಇದನ್ನು ನಿರ್ವಹಿಸಬಹುದು. ಇದರಿಂದ ಕೂಲಿ ಕಾರ್ವಿುಕರ ಸಮಸ್ಯೆ ನೀಗಿಸಬಹುದು. ಪ್ರತಿ 10 ಅಡಿಗೆ ಒಂದೊಂದು ಹಂತದಲ್ಲಿ ದೋಟಿ ವಿಸ್ತರಿಸಬಹುದು ಎಂದು ತಿಳಿಸಿದರು.

ಬೆಳೆಗಾರರ ಅನುಕೂಲಕ್ಕಾಗಿ ಆಪ್ಸ್​ಕೋಸ್​ನಿಂದ ವಿವಿಧ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಹಿಂದೆ ಆಪ್ಸ್​ಕೋಸ್ ಗ್ರೀನ್ ಸಾವಯವ ಗೊಬ್ಬರ ಬಿಡುಗಡೆ ಮಾಡಿತ್ತು. ಇದಕ್ಕೆ ಬೆಳೆಗಾರರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಡೊಲೋಮೀಟ್ ಸುಣ್ಣ ಸಹ ಆಪ್ಸ್​ಕೋಸ್​ನಿಂದ ಮಾರಾಟ ಮಾಡಲಾಗುತ್ತಿದೆ ಎಂದರು.

ಉಪಾಧ್ಯಕ್ಷ ಎ.ಒ.ರಾಮಚಂದ್ರ, ನಿರ್ದೇಶಕರಾದ ಕೆ.ಎಂ.ಸೂರ್ಯನಾರಾಯಣ, ಆರ್.ಎಸ್.ಗಿರಿ, ಕೆ.ಕಲ್ಯಾಣಪ್ಪ ಗೌಡ, ರಾಘವೇಂದ್ರ ಹೊಡಬಟ್ಟೆ, ಸೀತಾರಾಮಯ್ಯ ಕಟ್ಟಿನಕೆರೆ, ಮಂಜಪ್ಪ, ಕಾರ್ಯದರ್ಶಿ ನಂದೀಶ್​ಕುಮಾರ್, ಸಲಹೆಗಾರ ವಿಶ್ವನಾಥ್ ಹೆಗಡೆ, ಎಚ್.ಎನ್.ಲಂಬೋದರ ಇದ್ದರು.

ಅಡಕೆ ಬೆಳೆಗಾರರಾದ ನಾವು ಹಿಂದಿನಿಂದಲೂ ಕೊಳೆ ರೋಗದಿಂದ ಬೆಳೆ ಕಳೆದುಕೊಳ್ಳುತ್ತಿದ್ದೆವು. ಹವಾಮಾನ ವೈಪರೀತ್ಯ ಇನ್ನಿತರ ಕಾರಣಗಳಿಂದ ಅಡಕೆ ತೋಟಕ್ಕೆ ಸಕಾಲಕ್ಕೆ ಔಷಧ ಸಿಂಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಬನ್ ಫೈಬರ್ ದೋಟಿಯನ್ನು ಅರಕಲಗೂಡಿನಿಂದ ತರಿಸಿದ್ದೇವೆ.

| ಬಿ.ಎ.ಇಂದೂಧರ ಬೇಸೂರು, ಆಪ್ಸ್​ಕೋಸ್ ಅಧ್ಯಕ್ಷ