ಬೀದರ್: ಆಧುನಿಕ ಜತೆಗೆ ನಮ್ಮ ನೆಲಮೂಲದ ಜಾನಪದ ಸಂಸ್ಕೃತಿಯನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ವಿ. ಶಿವಪ್ರಕಾಶ ಹೇಳಿದರು.
ಜಾನಪದ ಪರಿಷತ್, ಕೇಂದ್ರದ ಸಂಸ್ಕೃತಿ ಸಚಿವಾಲಯ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕದಂಬ ಸಂಸ್ಥೆ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಡಿ ನಗರದಲ್ಲಿ ಆಯೋಜಿಸಿದ್ದ ಜಾನಪದ ಉತ್ಸವ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಜಾನಪದ ಜೀವನ ಮತ್ತು ಮನಸ್ಸಿಗೆ ಹತ್ತಿರವಾದ ಸಂಸ್ಕೃತಿ. ಇಂದಿನ ವೈಜ್ಞಾನಿಕ ಯುಗದಲ್ಲಿ ಬಹುತೇಕ ಜನ ಹಳೆಯದ್ದನ್ನು ಮರೆತು ಆಧುನಿಕತೆಗೆ ಒಗ್ಗಿಕೊಂಡಿದ್ದಾರೆ ಎಂದರು.
ಯಾಂತ್ರೀಕರಣ, ನಗರೀಕರಣ ಪ್ರಭಾವದಿಂದ ಜಾನಪದ ಒಂದಿಷ್ಟು ಮರೆಮಾಚಿರಬಹುದು. ಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಜಾನಪದ ಪದ್ಧತಿ ಅಳವಡಿಸಿಕೊಳ್ಳುತ್ತೇವೆ. ಆದರೆ ಹೊರಬಂದಾಗ ಅದನ್ನು ಮರೆಯುತ್ತಿದ್ದೇವೆ. ಹಿರಿಯರು ಹಾಕಿಕೊಟ್ಟ ಜಾನಪದ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಕಾರಿ ಪ್ರೇಮಸಾಗರ ದಾಂಡೇಕರ್ ಮಾತನಾಡಿ, ಸಂಬಂಧಿಕರು ಆಗಮಿಸಿದರೆ ಮನೆಯಲ್ಲಿರುವ ಖೌದಿ, ಒಳ್ಳು, ಒನಕೆ ಇತರ ಜಾನಪದ ವಸ್ತುಗಳನ್ನು ಬಚ್ಚಿಡುತ್ತಿದ್ದೇವೆ. ಹೀಗೆ ಮಾಡಿದರೆ ನಮ್ಮ ಸಂಸ್ಕೃತಿಯನ್ನು ನಾವೇ ಅಳಿಸಿದಂತಾಗುತ್ತದೆ. ಹಿರಿಯರು ಹಾಡಿದ ಜಾನಪದ ಗೀತೆಗಳನ್ನು ಸಂಗ್ರಹಿಸಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುವ ಅಗತ್ಯವಾಗಿದೆ ಎಂದರು.
ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಮಾತನಾಡಿ, ಗಡಿ ಜಿಲ್ಲೆ ಬೀದರ್ ನಲ್ಲಿ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಡಿ ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಜಾನಪದ ಸಮ್ಮೇಳನ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಶ್ರೀ ಡಾ.ರಾಜಶೇಖರ ಶಿವಾಚಾರ್ಯ ಗೋರ್ಟಾ ಸಾನ್ನಿಧ್ಯ, ಜಾನಪದ ಪರಿಷತ್ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಣಾಕಾರಿ ಓಂಕಾರ ರೋಗನ್, ನಿಜಲಿಂಗಪ್ಪ ತಗಾರೆ, ಮಹಾರುದ್ರಪ್ಪ ಆಣದೂರೆ, ಕಲ್ಲಪ್ಪ ವಣಗೆ, ಮಲ್ಲಮ್ಮ ಸಂತಾಜಿ, ದೇವಿದಾಸ ಚಿಮಕೋಡೆ, ಪವನ್ ನಾಟೇಕಾರ, ಬಸವರಾಜ ಹೆಗ್ಗೆ, ಧನರಾಜ ಆನೆಕಲೆ, ಡಾ.ನೀಲಗಂಗಾ ಹೆಬ್ಬಾಳೆ, ಸುನೀತಾ ಕೂಡ್ಲಿಕರ್, ಮಹಾನಂದ ಮಡಕಿ, ಶ್ರೀಧರ ಜಾಧವ್, ಸುನೀತಾ ಬುಡೇರಿ ಇತರರಿದ್ದರು.ಎಸ್.ಬಿ. ಕುಚಬಾಳ ಸ್ವಾಗತಿಸಿದರು. ಮಹಾರುದ್ರ ಡಾಕುಳಗೆ ನಿರೂಪಣೆ ಮಾಡಿದರು. ಶಿವಶರಣಪ್ಪ ಗಣೇಶಪುರ ವಂದಿಸಿದರು. ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತದ ನೂತನ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣನ್ ಸಾಳೆ ಹಾಗೂ ಜಿಲ್ಲಾಧ್ಯಕ್ಷ ಸತೀಶ್ ನೌಬಾದೆ ಅವರನ್ನು ಸನ್ಮಾನಿಸಲಾಯಿತು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ಉತ್ಸವದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಸಿದ್ಧಾರ್ಥ ಪದವಿ ಕಾಲೇಜಿನ ವಿದ್ಯಾರ್ಥಿಳಿಂದ ಕೋಲಾಟ, ಸರ್ಕಾರಿ ಮಹಿಳಾ ಪದವಿ ಕಾಲೇಜು ತಂಡದಿಂದ ಕಂಸಾಳೆ ನೃತ್ಯ, ಕರ್ನಾಟಕ ಕಾಲೇಜಿನ ವಿದ್ಯಾರ್ಥಿನಿಯರಿಂದ ಲಾವಣಿ ನೃತ್ಯ, ಸಿದ್ಧಾರೂಢ ಪದವಿ ಕಾಲೇಜು ಮಕ್ಕಳಿಂದ ಪೈತ್ರಿ ಕುಣಿತ, ಜಾನಪದ ವಿವಿ ಅಧ್ಯಯನ ಕೇಂದ್ರದಿಂದ ರೈತರ ಹಾಡು ಮತ್ತು ನೇಗಿಲಯೋಗಿ ನೃತ್ಯ, ಶಿವಕುಮಾರ ಆಣದೂರವಾಡಿ ತಂಡದಿಂದ ಸುಗ್ಗಿ ಕುಣಿತ ಆಕರ್ಷಕವಾಗಿದ್ದವು.