ಜಿಲ್ಲೆ

ಆಧಾರ್ ಹೌಸಿಂಗ್ ಫೈನಾನ್ಸ್ ವಿರುದ್ಧ ರೈತರ ಪ್ರತಿಭಟನೆ

ಮೈಸೂರು: ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ರೈತನಿಗೆ ವಂಚಿಸಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಮಂಗಳವಾರ ರೈತರು ಅರೆಬೆತ್ತಲೆ ಪ್ರತಿಭಟನೆಯನ್ನು ನಡೆಸಿದರು.

ಒಂಟಿಕೊಪ್ಪಲಿನಲ್ಲಿರುವ ಫೈನಾನ್ಸ್ ಕಂಪನಿಯ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ತಲೆ ಮೇಲೆ ಕಲ್ಲು ಇಟ್ಟುಕೊಂಡು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಿ.ನರಸೀಪುರ ತಾಲೂಕಿನ ದೊಡ್ಡನಹುಂಡಿಯ ಮಂಟೇಸ್ವಾಮಿ ಎಂಬ ರೈತರೊಬ್ಬರು 2018ರಲ್ಲಿ 13,80,00 ಮನೆ ನಿರ್ಮಾಣಕ್ಕಾಗಿ ಸಾಲ ತೆಗೆದುಕೊಂಡಿದ್ದು, 11.50 ಲಕ್ಷ ರೂ. ಪಾವತಿಸಿದ್ದರು. ಇನ್ನುಳಿದ 2.30 ಲಕ್ಷ ರೂ. ಇನ್ಶೂರೆನ್ಸ್, ಇನ್ನಿತರ ಸರ್ವಿಸ್ ಚಾರ್ಜ್ ಎಂದು ಹಿಡಿದುಕೊಳ್ಳಲಾಗಿದೆ.

20 ವರ್ಷಕ್ಕೆ ಸಾಲ ಕಂತು ಕಟ್ಟುವಂತೆ ನಿಗದಿ ಮಾಡಲಾಗಿತ್ತು. ಕೋವಿಡ್ ಸಮಯದಲ್ಲಿ 5 ತಿಂಗಳು ಕಂತು ಕಟ್ಟದಿರುವ ಕಾರಣಕ್ಕೆ 20 ವರ್ಷ ಅಲ್ಲ, 28 ವರ್ಷ ಸಾಲದ ಕಂತು ಕಟ್ಟಬೇಕು ಎಂದು ಫೈನಾನ್ಸ್ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ರೈತ ಆಘಾತಕ್ಕೆ ಒಳಗಾಗಿದ್ದಾನೆ ಎಂದು ತಿಳಿಸಿದರು.

ರೈತ ಈಗಾಗಲೇ ತೆಗೆದುಕೊಂಡಿರುವ ಸಾಲಕ್ಕಿಂತ ಹೆಚ್ಚಿನ ಹಣವನ್ನು ಕಟ್ಟಲಾಗಿದ್ದು, 20 ವರ್ಷಕ್ಕೆ ನಿಗದಿ ಮಾಡಿದ್ದನ್ನು 28 ವರ್ಷಕ್ಕೆ ಮಾಡಿದ್ದಾರೆ. ಇದೀಗ ಸಾಲದ ಮೊತ್ತ 72 ಲಕ್ಷ ರೂ. ಆಗುತ್ತದೆ. ನನ್ನ ಮನೆಯನ್ನು ಈಗ ಮಾರಾಟ ಮಾಡಿದರೂ ಅಷ್ಟಕ್ಕೆ ಹೋಗುವುದಿಲ್ಲ ಎಂದು ಅಳಲು ತೊಡಿಕೊಂಡಿದ್ದ ರೈತನು, 3 ಲಕ್ಷ ರೂ. ಕಟ್ಟಲು ಸಾಧ್ಯ ಎಂದು ತಿಳಿಸಿದ್ದರು. ಇದಕ್ಕೆ ಸಾಲದಾತರರು ಒಪ್ಪಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪಟ್ಟು ಹಿಡಿದಿರುವ ರೈತರು ಪ್ರತಿಭಟನೆಯನ್ನು ನಾಳೆಯೂ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಮುಖಂಡರಾದ ಕುರುಬೂರು ಸಿದ್ದೇಶ್, ಮಾರ್ಬಳ್ಳಿ ನೀಲಕಂಠಪ್ಪ, ದೇವನೂರು ವಿಜಯೇಂದ್ರ, ಉಡಿಗಾಲ ರೇವಣ್ಣ, ಸುಂದರಪ್ಪ, ಗೌರಿಶಂಕರ, ಕಿರಗಸೂರು ಪ್ರಸಾದ ನಾಯಕ, ಕೋಟೆ ಸುನಿಲ್, ಗೌರಿ ಶಂಕರ, ಕುರುಬೂರು ಪ್ರದೀಪ್ ಇನ್ನಿತರರಿದ್ದರು