ಜಿಲ್ಲೆ

ಆಧಾರ್ ಕೇಂದ್ರಗಳನ್ನು ಬಳಸಿಕೊಳ್ಳಿ

ಧಾರವಾಡ: ಹೊಸದಾಗಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಮಾಡಿಸಲು ಜಿಲ್ಲೆಯಲ್ಲಿ ಆಧಾರ್ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ (ಯುಐಡಿಎಐ) ಹೆಚ್ಚುವರಿ ಕೇಂದ್ರಗಳನ್ನು ಸ್ಥಾಪಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಸಾರ್ವಜನಿಕರು ಅವುಗಳ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲೆಯ ಆಧಾರ್ ನೋಂದಣಿ ಕೇಂದ್ರಗಳ ಹಾಗೂ ತಿದ್ದುಪಡಿ ಸೇವೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅಂಚೆ ಕಚೇರಿಗಳಲ್ಲಿ 32, ಬ್ಯಾಂಕ್​ಗಳಲ್ಲಿ 36, ಬಿಎಸ್​ಎನ್​ಎಲ್​ನ 3 ಕಚೇರಿ ಹಾಗೂ ಅವಳಿ ನಗರದ 8 ಕರ್ನಾಟಕ ಒನ್ ಕೇಂದ್ರಗಳಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಧಾರವಾಡದ ಮಿನಿ ವಿಧಾನಸೌಧ ಹಾಗೂ ತಾಲೂಕಿನ ನಾಡಕಚೇರಿ ಯಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ಆಧಾರ್ ಕಾರ್ಡ್ ಮಾಡಿಸಲು ಹೆಚ್ಚುವರಿಯಾಗಿ ಹುಬ್ಬಳ್ಳಿಯ ಕ್ಲಬ್ ರಸ್ತೆಯ ಕೋಟಕ್ ಮಹೀಂದ್ರಾ ಬ್ಯಾಂಕ್ ಹಿಂಭಾಗದ ಕಟ್ಟಡದಲ್ಲಿ ಯುಐಡಿಎಐ ಆಧಾರ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ನಿತ್ಯ 1,000 ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾಧಿಕಾರಿಗಳ ಕಚೇರಿಯ ಆಧಾರ್ ವಿಭಾಗದ ಸಮಾಲೋಚನಾ ಅಧಿಕಾರಿ ರುದ್ರೇಶ್ ಎಂ., ಲೀಡ್ ಬ್ಯಾಂಕ್ ಮ್ಯಾನೇಜರ್ ಈಶ್ವರ ಕೆ. ಹಾಗೂ ಬಿಎಸ್​ಎನ್​ಎಲ್ ಪ್ರಧಾನ ವ್ಯವಸ್ಥಾಪಕ ರಾಜಕುಮಾರ್, ಧಾರವಾಡ ವಿಭಾಗದ ಅಂಚೆ ಸಹಾಯಕ ಅಧೀಕ್ಷಕ ಐ.ಆರ್. ಮುತ್ನಳ್ಳಿ, ಕರ್ನಾಟಕ ಒನ್ ಕೇಂದ್ರದ ಸಹಾಯಕ ವ್ಯವಸ್ಥಾಪಕ ಅನೀಷ್, ಯುಐಡಿಎಐ ಸಹಾಯಕ ವ್ಯವಸ್ಥಾಪಕ ಪ್ರಶಾಂತ, ಇತರರಿದ್ದರು.

ಪ್ರತಿ ಕೇಂದ್ರಗಳಲ್ಲಿ ದಿನಕ್ಕೆ 30 ಅರ್ಜಿಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಲಾಗುವುದು. ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುವವರು ಅಗತ್ಯ ದಾಖಲಾತಿಗಳೊಂದಿಗೆ ಹಾಜರಿದ್ದು, ಹೆಸರು, ವಿಳಾಸ, ಮೊಬೈಲ್ ನಂಬರ್, ಇ-ಮೇಲ್, ಜನ್ಮದಿನಾಂಕ, ಬಯೋಮೆಟ್ರಿಕ್​ಅನ್ನು ನೀಡಬೇಕು. ಆಧಾರ್ ಕಾರ್ಡ್ ನಲ್ಲಿನ ಬದಲಾವಣೆಗಳಿಗಾಗಿ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. | ದೀಪಾ ಚೋಳನ್, ಜಿಲ್ಲಾಧಿಕಾರಿ