ಜಿಲ್ಲೆ

ಆಧುನಿಕ ಸ್ತ್ರೀಕುಲಕ್ಕೆ ಅಕ್ಕಮಹಾದೇವಿ ಸ್ಫೂರ್ತಿ

ಮೈಸೂರು: 12ನೇ ಶತಮಾನ ಶರಣೆ ಅಕ್ಕಮಹಾದೇವಿ ಆಧುನಿಕ ಸ್ತ್ರೀಕುಲಕ್ಕೆ ಸ್ಫೂರ್ತಿಯ ಸೆಲೆ ಮತ್ತು ಹೊಸ ಬೆಳಕು ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್ ಹೇಳಿದರು.


ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಮತ್ತು ನಗರ ಘಟಕ, ಕದಳಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ, ಕದಳಿ ರಜತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಅಕ್ಕ ಸಾಮಾನ್ಯ ಮಹಿಳೆಯಲ್ಲ. ಅವರು ಮಹಿಳಾ ಸ್ವಾತಂತ್ರೃ ಮತ್ತು ಜಾಗೃತಿಗೆ ಸಾಕ್ಷಿಪ್ರಜ್ಞೆ. ಅಭಿವ್ಯಕ್ತಿ ಸಂಸ್ಕೃತಿಯ ಸಂಕೇತ. ಒಟ್ಟಿನಲ್ಲಿ ಅವರು ದೀವಿಟಿಗೆ. ಅವರು ತೋರಿದ ದಾರಿಯಲ್ಲಿ ಮಹಿಳಾ ಕುಲ ಸಾಗಬೇಕಾಗಿದೆ ಎಂದರು.


ಬಸವಣ್ಣನವರು ಸ್ಥಾಪನೆ ಮಾಡಿದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು ಬಿಟ್ಟರೆ ಬಹಳ ಎತ್ತರದ ಸ್ಥಾನದಲ್ಲಿದ್ದ ಅಕ್ಕಮಹಾದೇವಿ, ಸೋತು ಗೆದ್ದ ಗಟ್ಟಿ ಮಹಿಳೆ. ಹೀಗಾಗಿ, ಈಗಿನ ಕಾಲದ ಮಹಿಳೆಯರಿಗೂ ಅವರು ಮಾರ್ಗದರ್ಶಕರು ಮತ್ತು ಅರಿವಿನ ಜ್ಯೋತಿ ಎಂದು ಪ್ರೊ.ಪದ್ಮಾಶೇಖರ್ ವಿಶ್ಲೇಷಿಸಿದರು.
ಮಹಿಳೆಯ ಪಾಲಿಗೆ ಮದುವೆ ಈಗಲೂ ಸ್ವಾತಂತ್ರೃ ಸತ್ವ ಪರೀಕ್ಷೆ. ವಿವಾಹವಿಲ್ಲದೆ ಮಹಿಳೆಯರಿಗೆ ಬೇರೆ ಗತಿಯೇ ಇಲ್ಲ ಎಂಬ ಕೆಟ್ಟ ಭಾವ ಇದೆ. ಪ್ರಸ್ತುಕ ಕಾಲದಲ್ಲೂ ಹಣ, ಅಂತಸ್ತು, ಸಂಪತ್ತು ಮಹಿಳೆಯರನ್ನು ಹಿಡಿದು ಇಟ್ಟುಕೊಂಡು ಆಳಲು ಪ್ರಯತ್ನಿಸುತ್ತದೆ. ಅಕ್ಕ ಕಾಲದಲ್ಲಿ ಪರಿಸ್ಥಿತಿ ಹೇಗೆ ಇತ್ತು ಎಂಬುದನ್ನು ಊಹಿಸಲು ಅಸಾಧ್ಯ ಎಂದರು.


ಬಾಹುಬಲಿಯಂತೆ ಅಕ್ಕಮಹಾದೇವಿಯನ್ನು ಸಮಾಜ ಒಪ್ಪಿಕೊಳ್ಳಲಿ:

ನಿಜವಾದ ಪ್ರೇಮದಲ್ಲಿ ಯಾವುದೇ ಬೇಡ. ಅಲ್ಲಿ ನಿರ್ಬಂಧಗಳೂ ಇಲ್ಲ. ಸಿದ್ಧ ವಿವಾಹದಲ್ಲಿ ಗಂಡಿನ ಹಕ್ಕುದಾರಿಕೆ ಇದ್ದರೆ, ಪ್ರೇಮ ವಿವಾಹದಲ್ಲಿ ಹೆಣ್ಣಿನ ಅರ್ಪಣೆಯ ತೀವ್ರತೆ ಇರುತ್ತದೆ. ಆದರೆ, ಮದುವೆ ಕಟ್ಟುಪಾಡಿನಿಂದ ದೂರವಾದ ಅಕ್ಕಮಹಾದೇವಿ ನಿಜವಾದ ವೀರವೈರಾಗ್ಯಿ ಮತ್ತು ವಿರಾಗಿಣಿ. ಜೈನದ ಧರ್ಮ ಬಾಹುಬಲಿಯಂತೆ ಅಕ್ಕಮಹಾದೇವಿಯನ್ನು ಸಮಾಜ ಒಪ್ಪಿಕೊಳ್ಳಬೇಕು ಎಂದು ಪ್ರೊ.ಪದ್ಮಾಶೇಖರ್ ಹೇಳಿದರು.


ಸುಧಾರಣೆಗಾಗಿಯೇ ಕೆಲಸ ಮಾಡಿದರು:


12ನೇ ಶತಮಾನದಲ್ಲಿ ಶರಣರ ಭಕ್ತಿ ಆಂದೋಲನ ಸಾಮಾಜಿಕ ಆಂದೋಲನವಾಗಿ ಪರಿವರ್ತನೆಗೊಂಡು ಹೊಸ ದಿಗಂತವನ್ನೇ ಸೃಷ್ಟಿಸಿತು. ಸಮಾಜ ಸುಧಾರಣೆಯಲ್ಲಿ ತೆಪೆ ಹಚ್ಚುವ ಕೆಲಸ ಮಾಡಲಿಲ್ಲ. ಪರಿಪೂರ್ಣ ಸುಧಾರಣೆಗಾಗಿಯೇ ಕೆಲಸವನ್ನು ಮಾಡಿದರು. ಜಾತಿರಹಿತ ಸಮಾಜ ಪರಿಕಲ್ಪನೆ ಬಿತ್ತಿದ್ದರು. ವೃತ್ತಿ, ಲಿಂಗ, ಜಾತಿ ಬೇಧವನ್ನು ನಿವಾರಣೆ ಮಾಡಿ ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಕಾಯಕದ ಮೂಲಕ ಸಾಧನೆ ಮಾಡಿ ವೃತ್ತಿಗಳಿಗೂ ಗೌರವ ತಂದುಕೊಟ್ಟಿದ್ದು ಶರಣರ ಚಳವಳಿ ಎಂದರು.


ವಚನ ಚಳವಳಿ ಸ್ತ್ರೀ ವರ್ಗಕ್ಕೆ ಆತ್ಮವಿಶ್ವಾಸ ತುಂಬಿ ಹೊಸ ಬೆಳಕು, ಜಾಗೃತಿ, ಚೈತನ್ಯ ಕೊಟ್ಟಿತು. ಸ್ತ್ರೀ ಮನಸ್ಸುಗಳನ್ನು ಸಾಂಪ್ರದಾಯಿಕ ಕಟ್ಟುಪಾಡುಗಳಿಂದ ಬಿಡುಗಡೆಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತಂದು ನಿಲ್ಲಿಸಿತು ಎಂದರು.


‘ಅಕ್ಕನ ಆಧ್ಯಾತ್ಮಿಕ ಮತ್ತು ಅನುಭಾವದ ದರ್ಶನ’ ಕುರಿತು ಉಪನ್ಯಾಸ ನೀಡಿದ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಮಾತನಾಡಿ, ಅನಾದಿಕಾಲದಿಂದ ರಾಜಕೀಯ, ಸಾಮಾಜಿಕ, ಆರ್ಥಿಕ ವಲಯದಿಂದ ಮಹಿಳೆಯರನ್ನು ಹೊರದಬ್ಬಲಾಗಿದೆ. ಮಾತೃ, ಸ್ತ್ರೀ ಎಂದು ಕರೆಯುವ ಮೂಲಕ ಆಕೆಯನ್ನು ಕುಟುಂಬದೊಳಗೆ ಕಟ್ಟಿಹಾಕಲಾಗಿದೆ. ಪುರುಷ ಪ್ರಧಾನ ಸಮಾಜವು ಆಕೆಗೆ ಅಳಲು ಅವಕಾಶ ನೀಡಿದೆಯೇ ಹೊರತು ಆಳಲು ಅವಕಾಶ ನೀಡಲಿಲ್ಲ ಎಂದರು.


12ನೇ ಶತಮಾನದ ವೀರಶೈವ ಚಳವಳಿ ಸ್ತ್ರೀಯರಿಗೆ ಗೌರವ ತಂದುಕೊಟ್ಟಿತು. ವಿವಿಧ ಕ್ಷೇತ್ರಗಳಲ್ಲಿ ಬೆಳೆಯಲು ಅವಕಾಶ ಕೊಟ್ಟಿತು. ಈ ಚಳವಳಿ ಒಂದು ಸಮಾಜ, ಒಂದು ಜನಾಂಗವನ್ನಷ್ಟೇ ಅಲ್ಲದೆ, ಇಡೀ ಮನುಕುಲವನ್ನು ತನ್ನೊಂದಿಗೆ ಕರೆದುಕೊಂಡು ಸಾಗಿತು ಎಂದರು


ಈ ಚಳವಳಿ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರೃ, ಆತ್ಮವಿಶ್ವಾಸ ಮೂಡಿಸಿತು. ಆಧ್ಯಾತ್ಮಿಕ, ಸಾಹಿತ್ಯ ವಲಯದಲ್ಲಿ ಕೆಲಸ ಮಾಡುವ ಮೂಲಕ ಅನ್ಯಾಯ, ಶೋಷಣೆ ವಿರುದ್ಧ ಧ್ವನಿಯೆತ್ತಲು ಅವಕಾಶ ಕಲ್ಪಿಸಿತು ಎಂದರು.


ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಸಿ.ಸೋಮಶೇಖರ್, ನಗರಾಧ್ಯಕ್ಷ ಮ.ಗು.ಸದಾನಂದಯ್ಯ, ಜಿಲ್ಲಾಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ರಾಜ್ಯ ಸಂಚಾಲಕಿ ಸುಶೀಲಾ ಸೋಮಶೇಖರ್, ಕಾರ್ಯದರ್ಶಿ ವಾಗ್ದೇವಿ ಇನ್ನಿತರರಿದ್ದರು.