ಲಕ್ಷ್ಮೇಶ್ವರ:ತಾಲೂಕಿನ ಕಪ್ಪತ್ತಗಿರಿಯ ಸೆರಗಿನಲ್ಲಿರುವ ಆದ್ರಳ್ಳಿ ಗ್ರಾಮದ ಪೂರ್ವಕ್ಕಿರುವ ಗುಡ್ಡವು ಅದ್ಭುತ, ವಿಸ್ಮಯಕಾರಿಯಾಗಿದೆ. ಈ ಗುಡ್ಡವು ಸಾಹಸಿಗರನ್ನು ಕೈ ಮಾಡಿ ಕರೆದರೆ, ದೈವಭಕ್ತರು ಕೈ ಮುಗಿದು ಬರುವಂತೆ ಮಾಡುತ್ತದೆ. 250 ಅಡಿ ಎತ್ತರವಿರುವ ಗುಡ್ಡದಲ್ಲಿ ಏಕಶಿಲಾ ಗವಿಸಿದ್ಧೇಶ್ವರ ದೇವಸ್ಥಾನವಿದೆ. ಸಣ್ಣ ಬಾಗಿಲಿನ ಮೂಲಕ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಈಶ್ವರನ ಮೂರ್ತಿ ಕಾಣಸಿಗುತ್ತದೆ. ಈ ಮೂರ್ತಿಯ ಹಿಂಭಾಗದಲ್ಲಿನ ಸುರಂಗ ಮಾರ್ಗಗಳಿವೆ. ಈ ಸುರಂಗಗಳಲ್ಲಿ ತೆವಳಿಕೊಂಡೇ ಹೋಗಬೇಕು. ಈ ಹಿಂದೆ ಕೆಲವರು ಈ ಸುರಂಗ ಮಾರ್ಗ ಪ್ರವೇಶಿಸಿ ಅರ್ಧದಲ್ಲಿಯೇ ಮರಳಿ ಬಂದಿದ್ದಾರೆ. ಕೆಲವರು ಹೇಳುವ ಪ್ರಕಾರ ಗವಿಯ ಒಳಗಡೆ ಬೃಹತ್ ಶಿಲಾ ಹುತ್ತಗಳು, ಲಿಂಗಗಳು, ಗಣಪತಿ ಮೂರ್ತಿಗಳಿವೆ. ಶಿವಲಿಂಗದ ಮೇಲೆ ನೀರು ಹನಿಹನಿಯಾಗಿ ಬೀಳುತ್ತದೆ. ಈ ಸುರಂಗಗಳು ಕೂಗಳತೆಯ ದೂರದಲ್ಲಿರುವ ಶ್ರೀಮಂತಗಡದ ಹೊಳಲಮ್ಮದೇವಿಯ ಗುಡಿಗೆ ಹೋಗಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಗುಡ್ಡದ ಮೇಲೆ ಹೋದರೆ ಅಲ್ಲಿನ ಕಲ್ಲು ಬಂಡೆಗಳ ಮಧ್ಯೆ ನೀರಿನ ಸಂಗ್ರಹವಿದ್ದು, ವರ್ಷದ ಎಲ್ಲ ಕಾಲದಲ್ಲೂ ನೀರು ಇರುತ್ತದೆ. ಗುಡ್ಡದ ಮೇಲೆ ವಿಭಿನ್ನ ಆಕಾರದ ಶಿಲಾಕೌತುಕಗಳನ್ನು ಕಾಣಬಹುದು. ಒಂದು ಬೃಹತ್ ಬಂಡೆ ಅಂಗೈ ಅಗಲದ ಕಲ್ಲಿನ ಮೇಲೆ ನಿಂತಿರುವುದು, ಹಾವಿನ ಹೆಡೆಯಾಕಾರದ ಬೃಹತ್ ಶಿಲೆ, ಕೊಡೆ ಆಕಾರದ ಬಂಡೆ ಮನಸೆಳೆಯುತ್ತವೆ.
ಇಷ್ಟೊಂದು ವಿಸ್ಮಯಗಳನ್ನು ಹೊಂದಿರುವ ಗವಿ ಸಿದ್ಧೇಶ್ವರ ಗುಡ್ಡದ ಬಗ್ಗೆ ಜನರಿಗೆ ಅಷ್ಟೊಂದು ತಿಳಿದಿಲ್ಲ. ಇಲ್ಲಿನ ವಿಸ್ಮಯಗಳ ಕುರಿತು ಸಂಶೋಧನೆ ನಡೆಯಬೇಕು. ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎನ್ನುತ್ತಾರೆ ಭಕ್ತ ಎಸ್.ಆರ್. ಪಾಟೀಲ.
ವಿಪರ್ಯಾಸವೆಂದರೆ ಈ ಗುಡ್ಡದ ಸುತ್ತಮುತ್ತಲೂ ಕಲ್ಲು ಗಣಿಗಾರಿಕೆ, ಹತ್ತಾರು ಕಲ್ಲಿನ ಕ್ರಷರ್ಗಳು ಸದ್ದು ಮಾಡುತ್ತಿವೆ. ಇವುಗಳ ಅಬ್ಬರಕ್ಕೆ ಈ ಗುಡ್ಡವೂ ಒಂದು ದಿನ ಬಲಿಯಾದರೆ ಅಚ್ಚರಿಪಡಬೇಕಿಲ್ಲ.
ಗ್ರಾಮಸ್ಥರು ಮತ್ತು ಇಲ್ಲಿನ ದೇಶಪಾಂಡೆ ಮನೆತನದವರು ಶಿವರಾತ್ರಿ, ಹಬ್ಬ ಹರಿದಿನ, ಜಾತ್ರಾ ಮಹೋತ್ಸವ ಕಾರ್ಯಕ್ರಮಗಳನ್ನು ತಪ್ಪದೇ ಆಚರಿಸುತ್ತಾ ಬಂದಿದ್ದಾರೆ. ಪ್ರತಿವರ್ಷ ಪಾಲ್ಗುಣ ಶುದ್ಧ ದಶಮಿ ದಿನದಂದು ಜಾತ್ರಾ ಮಹೋತ್ಸವ ಜರುಗುತ್ತದೆ. ಮಾ.5 ರಂದು ಸಂಜೆ 4 ಕ್ಕೆ ಮಹಾರಥೋತ್ಸವ ಹೂವಿನ ಹಡಗಲಿಯ ಗವಿಸಿದ್ಧೇಶ್ವರ ಶಾಖಾಮಠದ ಡಾ. ಹಿರಿಶಾಂತವೀರ ಸ್ವಾಮಿಗಳು ಹಾಗೂ ನರಸಾಪುರದ ಅನ್ನದಾನೇಶ್ವರ ಸಂಸ್ಥಾನಮಠದ ವೀರೇಶ್ವರ ಶಿವಯೋಗಿಗಳ ಸಾನನಿಧ್ಯದಲ್ಲಿ ಜರುಗಲಿದೆ. ರಾತ್ರಿ 8 ಕ್ಕೆ ಗದಗನ ವೀರೇಶ್ವರ ಪುಣ್ಯಾಶ್ರಮದ ಕುಬೇಂದ್ರ ಶಾಸ್ತ್ರಿ ಹಕ್ಕಂಡಿ ಇವರಿಂದ ಗವಿ ಸಿದ್ಧೇಶ್ವರ ಮಹಾತ್ಮೆ ಕೀರ್ತನೆ ಜರುಗುವುದು. ಮಾ. 6 ರಂದು ಕಡುಬಿನ ಕಾಳಗವಿದೆ. ಲಕ್ಷ್ಮೇಶ್ವರದಿಂದ ಕೇವಲ 15 ಕಿಮೀ ಅಂತರದಲ್ಲಿರುವ ಈ ಅದ್ಭುತ ಗವಿಗುಡ್ಡ ಈ ಭಾಗದ ಪ್ರೇಕ್ಷಣೀಯ ತಾಣವಾಗಿದೆ.