ತಿ.ನರಸೀಪುರ: ಪುರಸಭೆ ಸದಸ್ಯ ಟಿ.ಎಂ.ನಂಜುಂಡಸ್ವಾಮಿ ಪ್ರತಿನಿಧಿಸುವ ಪಟ್ಟಣದ 11ನೇ ವಾರ್ಡ್‌ನ ಇಂದಿರಾ ಕಾಲನಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, 2.5 ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಪುರಸಭಾ ವ್ಯಾಪ್ತಿಯ ಇಂದಿರಾ ಕಾಲನಿಯಲ್ಲಿ ಸೋಮವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ನಿಗಮ ಹಾಗೂ ಕಾವೇರಿ ನೀರಾವರಿ ನಿಗಮದಿಂದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಕೊಳಚೆ ಅಭಿವೃದ್ಧಿ ನಿಗಮದಿಂದ ಮನೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಈ ಹಿಂದೆ ವರುಣ ಕ್ಷೇತ್ರ ಪ್ರತಿನಿಧಿಸಿದ್ದ ಸಿದ್ದರಾಮಯ್ಯ ಅವರು ಸಾವಿರಾರು ಕೋಟಿ ರೂ. ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದಾರೆ. ಇದೀಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಬಿಜೆಪಿ ಶಾಸಕರಿರುವ ಕಡೆ ಹೆಚ್ಚಿನ ಅನುದಾನ ನೀಡಿ ಕಾಂಗ್ರೆಸ್ ಶಾಸಕರಿಗೆ ಅನುದಾನ ಕಡಿತ ಮಾಡುತ್ತಿದೆ. ಲಭ್ಯವಿರುವ ಅನುದಾನದಲ್ಲಿಯೇ ಅಗತ್ಯ ಇರುವೆಡೆ ಆದ್ಯತೆ ಮೇರೆಗೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದರು.
ವಾರ್ಡ್ ಸದಸ್ಯ ಟಿ.ಎಂ.ನಂಜುಂಡಸ್ವಾಮಿ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಭವನ ಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ನಾಗರತ್ನ ಮಾದೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅಹಮದ್, ಸದಸ್ಯರಾದ ಸೋಮಣ್ಣ, ತುಂಬಲ ಪ್ರಕಾಶ್, ಮೆಡಿಕಲ್ ನಾಗರಾಜು, ಸಿಸ್ಟಮ್ ಸಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹದೇವಣ್ಣ, ತಾಲೂಕು ಕುರುಬರ ಸಂಘದ ಕಾರ್ಯಾಧ್ಯಕ್ಷ ಮಾದೇಶ್, ತಾ.ಪಂ. ರಮೇಶ್, ಮುಖಂಡರಾದ ಬಿ.ಮರಯ್ಯ, ರಾಘವೇಂದ್ರ, ಹೇಮಂತ್, ಸ್ವಾಮಿ, ರಂಗಸ್ವಾಮಿ, ರಾಜು, ವಿನೋದ್, ಮುನ್ನ, ನಂದನ್, ಶಾಂತಕುಮಾರ್,ರೂಮನ್, ಸಿದ್ದಿಕ್, ಅಕ್ಬರ್, ಸೌಕತ್ ಅಲಿ ಇದ್ದರು.