ವಿಜಯವಾಣಿ ಸುದ್ದಿಜಾಲ ಶಿರಸಿ: ಕಳೆದ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಗ್ರಾಮೀಣ ಭಾಗದ ರಸ್ತೆಗಳನ್ನು ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ನಿರ್ಮಾಣ ಹಾಗೂ ನಿರ್ವಹಣೆ ಮಾಡುತ್ತಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಸಾಲಕಣಿ, ಇಟಗುಳಿ, ಹುತ್ಗಾರ, ಮೇಲಿನ ಓಣಿಕೇರಿ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ, ನಗರದ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸೇರಿ ಒಟ್ಟು 4.30 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಗೆ ಅನುದಾನ ಬರುತ್ತಿರಲಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಎಲ್ಲ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಪ್ರಸ್ತುತ ಬಿಜೆಪಿ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಗ್ರಾಮೀಣ ರಸ್ತೆಗಳ ಸುಧಾರಣೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಅಭಿವೃದ್ಧಿಯ ವೇಗ ಇದೇ ರೀತಿಯಿದ್ದರೆ ಶೀಘ್ರದಲ್ಲಿ ಗ್ರಾಮೀಣದ ಎಲ್ಲ ರಸ್ತೆಗಳು ಉತ್ತಮ ಸ್ಥಿತಿ ತಲುಪುತ್ತವೆ ಎಂದರು. ಶಿರಸಿ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರವಾಸೋಧ್ಯಮ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಮುಖಾಂತರ 27 ಕೋಟಿ ರೂ. ರಸ್ತೆ ಅಭಿವೃದ್ಧಿಗಾಗಿ ಬಿಡುಗಡೆಯಾಗಿದೆ. ಕೆಲವೆಡೆ ಹೊಸ ರಸ್ತೆಗಳ ನಿರ್ವಣ, ಮರು ಡಾಂಬರೀಕರಣ, ದುರಸ್ತಿ ಕಾರ್ಯ ಪೂರ್ಣಗೊಂಡರೆ ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಇತರರಿದ್ದರು.