ಚಾಮರಾಜನಗರ: ಆದಿವಾಸಿಗಳ ಕುರಿತು ಮಾಹಿತಿ ಪಡೆಯಲು ಬಯಸುತ್ತಿರುವವರು ಆದಿವಾಸಿಗಳನ್ನು ಬಳಕೆಯ ವಸ್ತುಗಳಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಅಶೋಕ ಪರಿಸರ ಸಂಶೋಧನೆ ಮತ್ತು ಪರಿಸರ ವಿಜ್ಞಾನ ದತ್ತಿ (ಏಟ್ರಿ) ಸಂಸ್ಥೆ ಸಂಶೋಧಕ ಡಾ.ಸಿ.ಮಾದೇಗೌಡ ಬೇಸರ ವ್ಯಕ್ತಪಡಿಸಿದರು.
ಹನೂರು ತಾಲೂಕಿನ ಲ್ಯಾಂಪ್ಸ್ ಭವನದಲ್ಲಿ ಏಟ್ರಿ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ಮತ್ತು ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಪೂರ್ವ ಮತ್ತು ಮಾಹಿತಿಯುಕ್ತ ಸಮ್ಮತಿ ಹಾಗೂ ಅರಣ್ಯ ಹಕ್ಕು ಕಾಯ್ದೆ-2006ರ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಆದಿವಾಸಿಗಳ ಕುರಿತು ಯಾರೂ ಏನು ಬರೆಯುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಅಲ್ಲದೆ, ಆದಿವಾಸಿಗಳ ಒಪ್ಪಿಗೆ ಪಡೆದು ಈ ಕೆಲಸ ಮಾಡಬೇಕು. ಸ್ವಯಂ ಸೇವಾ ಸಂಸ್ಥೆಗಳು, ಸಂಶೋಧಕರು, ಸರ್ಕಾರಗಳು ಆದಿವಾಸಿಗಳಿಗೆ ಮಾಹಿತಿ ನೀಡಬೇಕು. ಒಪ್ಪಿಗೆ ಪಡೆಯಬೇಕು ಎಂಬ ಕಾನೂನು ಇದೆ. ಕಾನೂನಿನಲ್ಲಿ ಏನಿದೆ, ಕಾನೂನಿನ ಪಾತ್ರವೇನು? ಎಂಬುದನ್ನು ಕೂಲಂಕಷವಾಗಿ ತಿಳಿದುಕೊಳ್ಳುವುದು ಕಾರ್ಯಾಗಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಏಟ್ರಿ ಸಂಸ್ಥೆ ಪ್ರಾಧ್ಯಾಪಕ ಡಾ. ಸಿದ್ದಪ್ಪ ಶೆಟ್ಟಿ ಮಾತನಾಡಿ, ಕಾನೂನಿನಲ್ಲಿ ಯಾವುದೇ ಮಾಹಿತಿಯನ್ನು ಪಡೆಯುವ ಮೊದಲು ಸಮುದಾಯದ ಜನರ ಒಪ್ಪಿಗೆಯನ್ನು ಪಡೆಯಬೇಕು ಎಂದರು. ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ಯು.ರಂಗೇಗೌಡ ಮಾತನಾಡಿದರು. ನಂತರ ಅರಣ್ಯ ಹಕ್ಕು ಕಾಯ್ದೆ ಮತ್ತು ಸಮುದಾಯ ಸಂರಕ್ಷಣೆ ಯೋಜನೆ ಬಗ್ಗೆ ಚರ್ಚೆ ಮಾಡಲಾಯಿತು. ಯೋಜನೆ ತಯಾರಿಸಲು ಮಾಹಿತಿ ಸಂಗ್ರಹಿಸಲಾಯಿತು. ಏಟ್ರಿ ಸಂಸ್ಥೆ ಡಾ. ಹರೀಶ, ಪಿ.ರಾಜಣ್ಣ, ಡಾ.ಶ್ರುತಿ, ಡಾ.ಸಮೀರ, ಪ್ರಾಚಿ, ವಿನಯ್, ಮುಖಂಡರಾದ ದೊಡ್ಡಸಿದ್ದಯ್ಯ, ಎಂ.ರಂಗೇಗೌಡ, ಮಾದೇವಯ್ಯ, ಸಿ.ಮಹದೇವ, ಶಿವಣ್ಣ, ಮುನಿರಾಜು, ಸಿದ್ದೇಗೌಡ, ಜಡೇಸ್ವಾಮಿ, ಮಾದೇಸ್ವಾಮಿ, ಚಂದ್ರಪ್ಪ, ಶ್ರೀನಿವಾಸ, ಜಡೇಮಾದಮ್ಮ, ಮಾದೇವಿ ಮಾದಮ್ಮ, ರಂಗಮ್ಮ, ಕೆಂಪಮ್ಮ, ಜಡೇಮಾದಮ್ಮ ಶಿವಕುಮಾರ್ ಇದ್ದರು.