ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಲಯ ಅಮಾವಾಸ್ಯೆ ವಿಶೇಷ ಪೂಜೆ ಭಾನುವಾರ ನಡೆಯಿತು.
ಶ್ರೀಕಾಲಭೈರವೇಶ್ವರಸ್ವಾಮಿ, ಮಾಳವ್ವದೇವಿ, ಗಂಗಾಧರೇಶ್ವರಸ್ವಾಮಿ, ಸ್ಥಂಭಾಭಿಕೆದೇವಿ ಹಾಗೂ ಭೈರವೈಕ್ಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಯನ್ನು ವಿಶೇಷವಾಗಿ ಪುಷ್ಪಾಲಂಕಾರದೊಂದಿಗೆ ಅಲಂಕರಿಸಲಾಗಿತ್ತು. ಭೈರವೈಕ್ಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಅಮಾವಾಸ್ಯೆ ಪೂಜೆಯಲ್ಲಿ ಆದಿಚುಂಚನಗಿರಿ ಮಠದ ವಿವಿಧ ಶಾಖಾ ಮಠದ ಸ್ವಾಮೀಜಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಯುವ ಮುಖಂಡ ಎಲ್.ಎಸ್.ಚೇತನ್ ಗೌಡ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಅಮಾವಾಸ್ಯೆ ಪೂಜೆಯ ನಂತರ ಕಾಲಭೈರವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮಠದ ಸಂಸ್ಕೃತ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸೂರ್ಯನಮಸ್ಕಾರ ಸಲ್ಲಿಸಿದರು. ಪೂಜೆಯ ನಂತರ ಶ್ರೀಗಳು ಭಕ್ತರಿಗೆ ಪ್ರಸಾದ ವಿತರಿಸಿ ನಂತರ ಸಹಪಕ್ತಿಯಲ್ಲಿ ಕುಳಿತು ಪ್ರಸಾದ ಸೇವಿಸಿದರು.