ಜಿಲ್ಲೆ

ಆದಾಯ ಸಂಗ್ರಹಿಸುವಲ್ಲಿ ಸಿಬ್ಬಂದಿ ವಿಫಲ

ಮಾನ್ವಿ: ಪಟ್ಟಣದ 27 ವಾರ್ಡ್‌ಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಿಲು ಅಗತ್ಯ ಕಾಮಗಾರಿಗಳ ಮಾಹಿತಿ ನೀಡಿದಲ್ಲಿ ಅನುದಾನ ಲಭ್ಯತೆ ಆಧಾರದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಬಿ.ದೇವರಮನಿ ತಿಳಿಸಿದರು.

ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಗುರುವಾರ ಮಾತನಾಡಿದರು. ರಾಜಾ ಮಹೇಂದ್ರನಾಯಕ ಮಾತನಾಡಿ, ಪಟ್ಟಣದ ಜನರಿಗೆ ಕುಡಿಯುವ ನೀರು, ಸ್ವಚ್ಛತೆ, ನೈರ್ಮಲ್ಯದಂತಹ ಕನಿಷ್ಠ ಮೂಲ ಸೌಲಭ್ಯಗಳನ್ನು ನೀಡುತ್ತಿಲ್ಲ. ಪುರಸಭೆಗೆ ಆದಾಯ ಸಂಗ್ರಹಿಸುವುದರಲ್ಲಿ ಸಿಬ್ಬಂದಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.

ಕಳೆದ 2 ವರ್ಷಗಳಿಂದ ಪುರಸಭೆಯ 40 ಮಳಿಗೆಗಳನ್ನು ಹರಾಜು ಹಾಕದೆ ಬಿಟ್ಟಿರುವುದರಿಂದ ಲಕ್ಷಾಂತರ ರೂ. ಖೋತಾ ಆಗಿದೆ. ಪಟ್ಟಣದಲ್ಲಿ ಆನಧಿಕೃತವಾಗಿ ಪ್ರತಿ ದಿನ ನೂರಾರು ಬ್ಯಾನರ್‌ಗಳನ್ನು ಅಳವಡಿಸಿದರೂ ಸಿಬ್ಬಂದಿ ಶುಲ್ಕ ಸಂಗ್ರಹಿಸುವುದಕ್ಕೆ ಮುಂದಾಗುತ್ತಿಲ್ಲ ಎಂದು ಮಹೇಂದ್ರ ನಾಯಕ ಅಸಮಧಾನ ವ್ಯಕ್ತಪಡಿಸಿದರು.

ಲಕ್ಷ್ಮೀದೇವಿ ನಾಯಕ ಮಾತನಾಡಿ, ಪಟ್ಟಣದಲ್ಲಿರುವ ಕೊಳೆಗೇರಿ ಪ್ರದೇಶಗಳನ್ನು ಸರಿಯಾಗಿ ಪರಿಶೀಲನೆ ನಡೆಸಿ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ವರದಿ ನೀಡಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕು. ಅನೇಕ ವರ್ಷಗಳಿಂದ ಪುರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಸಾಮಾನ್ಯ ಸಭೆಗೆ ಪೊಲೀಸ್, ಜೆಸ್ಕಾಂ ಹಾಗೂ ವಿವಿಧ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಬೇಕು ಎಂದು ಒತ್ತಾಯಿಸಿದರು.

ಸಂತೋಷಿರಾಣಿ ಮಾತನಾಡಿ, ಗಂಗಾಧರ ನಾಯಕ ಕಾಲನಿಯಲ್ಲಿನ ಬಾವಿಗೆ ಜಾಲರಿ ಅಳವಾಡಿಸಬೇಕು. ಕುಡಿಯುವ ನೀರಿನ ನಳಗಳನ್ನು ದುರಸ್ತಿ ಮಾಡಿ ನೀರು ಪೋಲಾಗದಂತೆ ತಡೆಯಬೇಕು ಎಂದು ಆಗ್ರಹಿಸಿದರು. ಕುಡಿಯುವ ನೀರಿನ, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಕೊಳೆಗೇರಿ ಪ್ರದೇಶದ ಸಮಸ್ಯೆಗಳ ಕುರಿತು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ವರದಿ ವರದಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಪರಶುರಾಮ ದೇವರಮನಿ ಭರವಸೆ ನೀಡಿದರು.

ಅ.24 ರಿಂದ ನ.24 ರವರೆಗಿನ ಜಮಾ-ಖರ್ಚುಗಳಿಗೆ ಮಂಜೂರಾತಿ ನೀಡುವುದು ಸೇರಿದಂತೆ 9 ವಿವಿಧ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು. ಅಧ್ಯಕ್ಷೆ ಲಕ್ಷ್ಮೀ ಡಿ.ವೀರೇಶ, ಉಪಾಧ್ಯಕ್ಷೆ ಮೀನಾಕ್ಷಿ ರಾಮಕೃಷ್ಣ, ಸದಸ್ಯರಾದ ಶೇಖ್ ಫರೀದ್ ಉಮರಿ, ಅಮ್ಜದ್ ಖಾನ್, ಬಾಷಾಸಾಬ್, ಶರಣಪ್ಪ ಮೇದಾ, ರೇವಣಸಿದ್ದಯ್ಯಸ್ವಾಮಿ, ಸುಖಮುನಿ, ಬಸವರಾಜ ಭಜಂತ್ರಿ, ಅಧಿಕಾರಿಗಳು, ಸಿಬ್ಬಂದಿ ಇದ್ದರು.