ಹಾಸನ: ಸಕಾರಣ ನೀಡದೆ ಸುಮಾರು 50-60 ಬೆಳೆಗಾರರ 1,900 ಚೀಲ ಅಡಕೆಯನ್ನು ವಾಣಿಜ್ಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಾಏಕಿ ಸೀಜ್ ಮಾಡಿದ್ದು, ಇದನ್ನು ಖಂಡಿಸಿ ರೈತ ಸಂಘದಿಂದ ಇಂದಿನಿಂದ ಅಹೋರಾತ್ರಿ ಧರಣಿ ಹಮ್ಮಿಕೊಂಡಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ತಿಳಿಸಿದರು.
ಹತ್ತಾರು ರೈತರು ಬೆಳೆದ ಅಡಕೆ ಕಾಯಿಯನ್ನು ಕಟಾವು ಮಾಡಿ ಒಟ್ಟು ಗೂಡಿಸಿ ರಾಮನಾಥಪುರ ಹೋಬಳಿ ಕಾಳೇನಹಳ್ಳಿಯ ಖಾಸಗಿ ಗೋದಾಮಿನಲ್ಲಿ ಸಂಸ್ಕರಣೆ ಮಾಡಲಾಗಿತ್ತು. ಚೀಲದ ಸಂಖ್ಯೆ, ಪಹಣಿ ಎಲ್ಲವೂ ಅಲ್ಲೇ ಇದೆ. ಆದರೆ ಆದಾಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಡಕೆ, ಗೂಡ್ಸ್ ಆಟೋಸಹಿತ ಸುಮಾರು 5-6 ಕೋಟಿ ರೂ. ಮೌಲ್ಯದ ಅಡಕೆಯನ್ನು ಸೀಜ್ ಮಾಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಇದನ್ನು ನಾವು ಪ್ರಶ್ನೆ ಮಾಡಿದರೆ ಅಧಿಕಾರಿಗಳು ಯಾವುದೇ ಉತ್ತರ ನೀಡುತ್ತಿಲ್ಲ. ಕಳೆದ ವಾರ ಅಡಕೆ ಬೆಳೆದಿರುವ ರೈತರ ಪಹಣಿ, ಫ್ರೂಟ್ ಐಡಿ ಸೇರಿ ಸಂಬಂಧಪಟ್ಟ ದಾಖಲೆ ನೀಡಿದ್ದರೂ ಅದನ್ನೂ ಪರಿಶೀಲಿಸಿಲ್ಲ. ಮೇಲಧಿಕಾರಿಗಳು ಇರುವ ಶಿವಮೊಗ್ಗಕ್ಕೆ ಹೋಗಿ ಎನ್ನುತ್ತಾರೆ. ಅಕಸ್ಮಾತ್ ಮಳೆ ಬಂದರೆ 1900 ಚೀಲ ಅಡಕೆ ಹಾಳಾಗಲಿದೆ. ಅದರ ನಷ್ಟ ಕಟ್ಟಿಕೊಡುವವರು ಯಾರು ಎಂದು ಪ್ರಶ್ನಿಸಿದರು.
ಗೋದಾಮಿನಲ್ಲಿ ಅಡಕೆ ಸೀಜ್ ಮಾಡಿದ ನಂತರ ಅಧಿಕಾರಿಗಳು ರೈತರ ತೋಟಗಳಿಗೆ ಹೋಗಿ ಗೋದಾಮು ಮಾಲೀಕ ಲೋಕೇಶ್ ಎಂಬುವರ ಮೇಲೆ ದೂರು ಹೇಳುವಂತೆ ಒತ್ತಡ ಹೇರುತ್ತಿದ್ದಾರೆ. ಉದಾಹರಣೆಗೆ ಯಾರೋ ಮಾಲೀಕರು ಮೋಟಾರ್ ಅಳವಡಿಸಿಕೊಂಡು ಶುಂಠಿ ಸ್ವಚ್ಛ ಮಾಡುವಾಗ ಹಲವು ರೈತರು ಶುಂಠಿ ತಂದು ರಾಶಿ ಹಾಕುತ್ತಾರೆ. ಅದನ್ನು ಸೀಜ್ ಮಾಡಿದರೆ ಹೇಗೆ ಎಂದು ಕೇಳಿದರು.
ಗೋದಾಮು ಮಾಲೀಕರೋ ಅಥವಾ ರೈತರೋ ಅಡಗೆ ಸಾಗಣೆ ಮಾಡುವಾಗ ಹಿಡಿದರೆ ನಮ್ಮ ತಕರಾರು ಇಲ್ಲ. ಆದರೆ ಸಂಗ್ರಹ ಮಾಡಿರುವ ಅಡಕೆಯನ್ನು ಯಾವುದೇ ಮಾರಾಟ ಮಾಡದೆ ಹದಗೊಳಿಸಲು ದಾಸ್ತಾನು ಮಾಡಿದ್ದನ್ನು ಸೀಜ್ ಮಾಡಿರುವುದು ಎಷ್ಟು ಸರಿ? ಅಡಕೆ ಅಗತ್ಯ ವಸ್ತು ಕಾಯ್ದೆ ಅಡಿ ಬರಲಿದ್ದು, ರೈತರು ಪೂರಕ ದಾಖಲೆ ಕೊಟ್ಟರೂ ಅಡಕೆ ನೀಡುತ್ತಿಲ್ಲ. ಹೀಗಾಗಿ ಅಧಿಕಾರಿಗಳ ವರ್ತನೆ ಖಂಡಿಸಿ ಫೆ.21ರ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ನಿರ್ಧಾರ ಮಾಡಿದ್ದೇವೆ ಎಂದರು.
ನಾವು ಒಂದು ಕ್ವಿಂಟಾಲ್ ಹಸಿ ಅಡಕೆ ನೀಡಿದರೆ ಗೋದಾಮು ಮಾಲೀಕರು 12 ಕೆಜಿ ಒಣ ಅಡಕೆ ಕೊಡುತ್ತಾರೆ. ಅದನ್ನು ನಾವು ಮಾರಾಟ ಮಾಡಿ ಜೀವನೋಪಾಯ ನಡೆಸುತ್ತಿದ್ದೇವೆ. ಅದಕ್ಕೂ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಹೆಚ್ಚು ಅಡಕೆ ಮಾರಾಟ ಮಾಡಿದರೆ ಜಿಎಸ್‌ಟಿ ವಿಧಿಸಲಿ, ಅದು ಬಿಟ್ಟು ಇನ್ನೂ ಸಂಗ್ರಹಣಾ ಹಂತದಲ್ಲಿರುವಾಗ ಗೋದಾಮಿಗೆ ಬೀಗ ಹಾಕಿದರೆ ನಮ್ಮ ಬದುಕು ನಡೆಯುವುದು ಹೇಗೆ ಎಂದರು.
ಈಗ ದಾಸ್ತಾನು ಮಾಡಿ, ಅಡಕೆ ಸಿದ್ಧವಾಗಿ ಬೇಡಿಕೆ ಬಂದಾಗ ಮಾರ್ಕೆಟಿಂಗ್ ಮಾಡುತ್ತೇವೆ. ಈಗ ಅಡಕೆಗೆ ಉತ್ತಮ ಬೆಲೆ ಇದ್ದು, ಆದಾಯ ಹೊಂದುವ ಆಸೆಗೆ ಅಧಿಕಾರಿಗಳು ಅಡ್ಡಿಯಾಗಿದ್ದಾರೆ. ಅಡಕೆ ರೈತರಿಗೆ ಕೊಡಲು ಕಾಲಃಹರಣ ಮಾಡುತ್ತಿರುವುದರ ವಿರುದ್ಧ ಹಾಗೂ ಅಡಕೆ ವಾಪಸ್ ನೀಡುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಯೋಗಣ್ಣ, ವೀರೇಂದ್ರ, ಗಂಗಾಧರ, ಗೋದಾಮು ಮಾಲೀಕ ಲೋಕೇಶ್, ನಾಗೇಶ್ ಇದ್ದರು.