ಕೂಡ್ಲಿಗಿ: ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ಇರಬೇಕಾದರೆ ಕೈವಾರ ತಾತಯ್ಯ ಅವರ ತತ್ವಾದರ್ಶಗಳ ಪಾಲನೆಯಾಗಬೇಕೆಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಶ್ರೀ ಯೋಗಿ ನಾರೇಯಣ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಕೈವಾರ ತಾತಯ್ಯ ಅವರ ಆದರ್ಶಗಳ ಮೇಲೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ತತ್ವಪದ, ಕೀರ್ತನೆಗಳ ಮೂಲಕ ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು. ಅವರ ಆದರ್ಶಗಳನ್ನು ಜನರಿಗೆ ತಲುಪಿಸಲು ಜಯಂತಿ ಆಯೋಜನೆ ಸಹಕಾರಿ ಎಂದು ಹೇಳಿದರು.
ಶ್ರೀ ಯೋಗಿ ನಾರೇಯಣ ಕೈವಾರ ತಾತಯ್ಯ ಯಾವುದೇ ವರ್ಗಕ್ಕೆ ಸೀಮಿತರಲ್ಲ. ಅವರು ಸಮ ಸಮಾಜದ ವ್ಯವಸ್ಥೆಗೆ ಶ್ರಮಿಸಿದ್ದರು. ಬಲಿಜ ಸಮುದಾಯ ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದರಿಂದ ಸಮುದಾಯ ಆರ್ಥಿಕ, ಸಾಮಾಜಿಕವಾಗಿ ಬಲಾಢ್ಯವಾಗಲು ಸಹಕಾರಿ ಎಂದು ತಹಸೀಲ್ದಾರ್ ತಿಳಿಸಿದರು.
ಪ್ರಮುಖರಾದ ಬಳೆಗಾರ ಬಸವರಾಜಪ್ಪ, ಬಿ.ಹನುಮಂತಪ್ಪ, ಬಳೆಗಾರ ರುದ್ರೇಶ್, ಅಶೋಕ, ಮಯೂರ, ಗೋವಿಂದಪ್ಪ, ತುಕಾರಾಮ್ ನಾಯ್ಡು, ಪೂಜಾರ ರಾಮಚಂದ್ರಪ್ಪ, ಪಾರ್ಥ ಇತರರಿದ್ದರು.