ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರ ದಿನ ಸಮಯದಲ್ಲಿ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿವಗಂಗಾ ವೀರಪ್ಪ ರಾಮಾಪುರ ದತ್ತಿ ನಿಮಿತ್ತ ಶಿಕ್ಷಣ, ಸಾಮಾಜಿಕ ಕ್ಷೇತ್ರದ ಗಣನೀಯ ಸೇವೆಗೆ ನೀಡುವ 2023ನೇ ಸಾಲಿನ ಆದರ್ಶ ಶಿಕ್ಷಕ ದಂಪತಿ ಪುರಸ್ಕಾರಕ್ಕೆ ಸುಜಾತಾ ಹಾಗೂ ಆರ್.ಎಸ್. ಮುಳ್ಳೂರ ಶಿಕ್ಷಕ ದಂಪತಿ ಆಯ್ಕೆಯಾಗಿದ್ದಾರೆ.
ಸುಜಾತಾ ತಿಮ್ಮಾಪುರ 1997ರಲ್ಲಿ ರಾಮದುರ್ಗ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಆರಂಭಿಸಿ, ಹಿರೇಹೊನ್ನಳ್ಳಿ ಪ್ರೌಢಶಾಲೆ ಮುಖ್ಯಾಧ್ಯಾಪಕಿ, ಧಾರವಾಡ ಡೈಟ್ ಉಪನ್ಯಾಸಕಿ, ಸಿಸ್ಲೆಪ್ ಸಂಸ್ಥೆ ಉಪನ್ಯಾಸಕಿ, ಪ್ರಸ್ತುತ ಆಯುಕ್ತರ ಕಚೇರಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೇವಾ ಅವಧಿಯಲ್ಲಿ ಸಾವಿರಾರು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತ ಶಿಕ್ಷಣ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಇವರ ಪತಿ ರಾಮರಡ್ಡಿ ಶಿವರಡ್ಡಿ ಮುಳ್ಳೂರ 1994ರಿಂದ ಚಿಕ್ಕೋಡಿ ಜಿಲ್ಲೆ ಶಿರನೂರ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರಾಗಿ ಸೇವೆ ಆರಂಭಿಸಿ, ಸವದತ್ತಿ, ಕಲಘಟಗಿ, ನವಲಗುಂದ, ಜಮಖಂಡಿಯಲ್ಲಿ ವಿವಿಧ ಹುದ್ದೆಗಳಲ್ಲಿ ಶೈಕ್ಷಣಿಕ ಮಾರ್ಗದರ್ಶಕರಾಗಿ, ವಿವಿಧ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಹಾವೇರಿ ಡೈಟ್ ಉಪನ್ಯಾಸಕ, ಧಾರವಾಡ ಆಯುಕ್ತರ ಕಚೇರಿಯಲ್ಲಿ ಜಂಟಿ ನಿರ್ದೇಶಕರಾಗಿ ಸೇವೆಸಲ್ಲಿಸಿ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ.
ಸೆ. 8ರಂದು ಸಂಜೆ 6 ಗಂಟೆಗೆ ಸಂಘದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ಕವಿಸಂ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.