ಜಿಲ್ಲೆ

6 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು

ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಸಮಿಪದ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಕ ಹಾಗೂ 6 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಬುಧವಾರ ಶಾಲೆಯ ಎಲ್ಲ ವಿದ್ಯಾರ್ಥಿಗಳ ಗಂಟಲ ದ್ರವ ಪರೀಕ್ಷಿಸಲಾಯಿತು.

ಶಾಲೆಯ ಕೆಲ ಮಕ್ಕಳಿಗೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡ ಕಾರಣ ಜ.17ರಂದು 10 ಶಿಕ್ಷಕರು, 36 ವಿದ್ಯಾರ್ಥಿಗಳ ಕರೊನಾ ಟೆಸ್ಟ್ ನಡೆಸಲಾಯಿತು. ಈ ಪೈಕಿ ಒಬ್ಬ ಶಿಕ್ಷಕನಿಗೆ ಮತ್ತು 6 ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದೆ. ಜ.18ರಂದು ಮತ್ತೆ 50 ಮಕ್ಕಳ ಕರೊನಾ ಟೆಸ್ಟ್ ಮಾಡಲಾಗಿದ್ದು, ಗುರುವಾರ ಫಲಿತಾಂಶ ಗೊತ್ತಾಗಲಿದೆ. ಶಾಲೆಯ ಎಲ್ಲ ಮಕ್ಕಳ ಕರೊನಾ ಟೆಸ್ಟ್ ನಡೆಸುವಂತೆ ಎಸ್​ಡಿಎಂಸಿ ಪದಾಧಿಕಾರಿಗಳು ಹಾಗೂ ಪಾಲಕರು ಒತ್ತಾಯಿಸಿದ್ದರಿಂದ ಡಾ. ಶಂಕರ ಬಾವಿಮನಿ ನೇತೃತ್ವದ ಸಿಬ್ಬಂದಿ ಸುಮಾರು 300ಕ್ಕೂ ಹೆಚ್ಚು ಮಕ್ಕಳ ಗಂಟಲ ದ್ರವ ಮಾದರಿ ಪರೀಕ್ಷೆ ಮಾಡಿದರು.

ತಹಸೀಲ್ದಾರ್ ಆಶಪ್ಪ ಪೂಜಾರಿ, ಬಿಇಒ ಕೆ.ಡಿ. ಬಡಿಗೇರ ಇತರರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಮುಖ್ಯಶಿಕ್ಷಕ ಯುವರಾಜ ಮುಂಡರಗಿ, ಎಸ್​ಡಿಎಂಸಿ ಅಧ್ಯಕ್ಷ ವೀರನಗೌಡ ಪಾಟೀಲ, ಸದಸ್ಯ ಸುರೇಶ ಹಲವಾಗಲಿ ಇತರರಿದ್ದರು.

ಸೋಂಕು ದೃಢಪಟ್ಟಿದ್ದರಿಂದ ಜ.20ರಿಂದ ಒಂದು ವಾರ ಶಾಲೆಗೆ ರಜೆ ನೀಡಲಾಗುತ್ತದೆ. ಜ. 26ರಂದು ಕೋವಿಡ್ ನಿಯಮಾವಳಿ ಪ್ರಕಾರ ಸರಳವಾಗಿ ಗಣರಾಜ್ಯೋತ್ಸವ ಆಚರಿಸಬೇಕು ಎಂದು ತಹಸೀಲ್ದಾರ್ ಆಶಪ್ಪ ಪೂಜಾರಿ ಮುಖ್ಯಶಿಕ್ಷಕರಿಗೆ ಸೂಚಿಸಿದರು.