ಜಿಲ್ಲೆ

ಆದರ್ಶ ಜೀವನದ ಮಹತ್ವದ ಮಹರ್ಷಿ

ಬಳ್ಳಾರಿ : ರಾಮಾಯಣ ರಚಿಸಿ ಮಹಾಪುರುಷ ಶ್ರೀರಾಮನ ಆದರ್ಶ ಜೀವನ ರೂಪದ ಪರಿಕಲ್ಪನೆ ತಿಳಿಸಿಕೊಟ್ಟಂತಹ ಮಹರ್ಷಿ ವಾಲ್ಮೀಕಿ ಅಪಾರ ಜ್ಞಾನ ಭಂಡಾರ ಹೊಂದಿದ್ದರು ಎಂದು ಶಾಸಕ ಬಿ.ನಾಗೇಂದ್ರ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಾಲ್ಮೀಕಿ ಗುರುಗಳು ಮಹಾನ್ ಋಷಿ, ಪ್ರಸಿದ್ಧ ಕವಿ ಮಾತ್ರವಲ್ಲದೇ ಉತ್ತಮ ಆಡಳಿತಗಾರರಾದ್ದವರು. ಶಿಕ್ಷಣ, ಸಂಸ್ಕೃತಿ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಟ್ಟುಕೊಂಡು ರಾಮಾಯಣದಲ್ಲಿ ಉತ್ತಮ ಆಡಳಿತ ರೂಪುದರ್ಶನ ನೀಡಿದ್ದಾರೆ ಎಂದರು.
ರಚಿಸಿದ ರಾಮಾಯಣ ಕೃತಿಯ ಮೂಲಕ ಪಿತೃತ್ವ, ಮಾತೃತ್ವ ಹಾಗೂ ಸತಿ-ಪತಿ ನಡುವಿನ ಸಂಬಂಧದ ಕುರಿತ ಜೀವನ ಸಾರವನ್ನು ತಿಳಿಸಿಕೊಟ್ಟವರು ವಾಲ್ಮೀಕಿ. ವಾಲ್ಮೀಕಿ ಸಮುದಾಯದವರು ಮುಂದಿನ ದಿನಮಾನಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃಧ್ಧಿ ಹೊಂದಬೇಕು ಎಂದು ತಿಳಿಸಿದರು.
ಬಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣದಿಂದ ಇಂದು ನಾವೆಲ್ಲರೂ ಆದರ್ಶ ಪುರುಷ ಶ್ರೀರಾಮನನ್ನು ಜಪಿಸುತ್ತಿದ್ದೇವೆ. ವಾಲ್ಮೀಕಿ ಅವರ ಸಿದ್ಧಾಂತ ನಾವೆಲ್ಲರೂ ಪಾಲಿಸೋಣ ಎಂದು ಹೇಳಿದರು.
ಯುವಕರು ಶ್ರೀ ಮಹರ್ಷಿ ವಾಲ್ಮೀಕಿ ಅವರು ಹಾಕಿಕೊಟ್ಟ ದಾರಿದೀಪದಲ್ಲಿ ನಡೆದು, ಅಭಿವೃದ್ಧಿ ಪಥದತ್ತ ಸಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಣ್ಯರು ಸೇರಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜಿ.ರುದ್ರಪ್ಪ ರಾಮಾಯಣ ಸಾರವನ್ನು ಪಠಣೆ ಮಾಡಿದರು.
ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಯು ವಾಲ್ಮೀಕಿ ಪುತ್ಥಳಿಯೊಂದಿಗೆ ವಿವಿಧ ಕಲಾತಂಡಗಳು ವಾದ್ಯಗಳ ಜೊತೆಗೆ ಎಸ್‌ಪಿ ಸರ್ಕಲ್‌ನಿಂದ ವಾಲ್ಮೀಕಿ ಭವನಕ್ಕೆ ತಲುಪಿ ಸಂಪನ್ನಗೊಂಡಿತು. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಸ್ನಾತ್ತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಪಿಹೆಚ್‌ಡಿ ಪದವಿ ಪಡೆದವರಿಗೆ ಹಾಗೂ ಕಲಾವಿದರು, ಪ್ರಗತಿಪರ ರೈತರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.